ಕನ್ನಡಪ್ರಭ ವಾರ್ತೆ ದಾವಣಗೆರೆ
ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಹೊನ್ನಾಳಿ-ನ್ಯಾಮತಿ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಜನರು ಸ್ಪಂದಿಸಿದ್ದರೂ ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ಸಿನ ಕೆಲವರು ಗೂಂಡಾಗಿರಿ ಮಾಡಿದ್ದಾರೆ. ಸಾರ್ವಜನಿಕವಾಗಿ ತೋಳು ತಟ್ಟಿಕೊಂಡ, ತೊಡೆ ತಟ್ಟಿಕೊಂಡ ಶಾಸಕ ಶಾಂತನಗೌಡ ಅವಾಚ್ಯವಾಗಿ ಮಾತನಾಡುವುದು, ತೊಡೆ, ತೋಳು ತಟ್ಟಿಕೊಳ್ಳುವುದ ಬಿಟ್ಟು, ಹೊನ್ನಾಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿ, ತಮ್ಮ ಗಂಡಸ್ಥನ ತೋರಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬಂದ್ ಯಶಸ್ವಿಯಾಗುವುದನ್ನು ಗ್ರಹಿಸಿದ ಶಾಸಕ ಶಾಂತನಗೌಡ, ಕಾಂಗ್ರೆಸ್ಸಿನ ಕೆಲವರು ಹೊನ್ನಾಳಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಮ್ಮುಖದಲ್ಲೇ ಪ್ರತಿಭಟನಾಕಾರರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಶಾಂತನಗೌಡ, ಕಾಂಗ್ರೆಸ್ಸಿನ ಕೆಲವರು ಗೂಂಡಾವರ್ತನೆ ತೋರಿದರು. ಹೋರಾಟನಿರತ ರೈತರು, ಕಾರ್ಯಕರ್ತರಿಗೆ ಅವಾಚ್ಯವಾಗಿ ನಿಂದಿಸಿ, ಮುಖಂಡ ಪಾಲಾಕ್ಷಪ್ಪ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು.
ಬಿಜೆಪಿ ಹಿರಿಯ ಮುಖಂಡ ಪಾಲಾಕ್ಷಪ್ಪ ಮೇಲೆ ಎರಡು ಸಲ ದೌರ್ಜನ್ಯ ಎಸಗಿದ್ದು, ದೂರು ಕೊಟ್ಟರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ನಮಗೆ ಸಂಘರ್ಷ ಬೇಡ, ರೈತರಿಗೆ ನ್ಯಾಯ ಬೇಕು. ಹೊನ್ನಾಳಿಯಲ್ಲಿ ಸೋಮವಾರ ಬೆಳಿಗ್ಗೆಯೇ ಶಾಸಕ ಸಿಕ್ಕಾಗ ಸಂಘರ್ಷ ಬೇಡ, ರೈತರಿಗೆ ನ್ಯಾಯಬೇಕೆಂದಿದ್ದೆ. ಪೊಲೀಸರು, ನಮಗೂ ಅವಾಚ್ಯವಾಗಿ ನಿಂದಿಸಿದ ಶಾಂತನಗೌಡ, ಕಾಂಗ್ರೆಸ್ಸಿನ ಕೆಲವರ ವರ್ತನೆಯಿಂದಿ ಶಾಂತಿ ಕದಡಬಾರದೆಂದು ನಾವೂ ಸುಮ್ಮನಾದೆವು. ಆದರೆ, ಬೆಳಿಗ್ಗೆ 10.30ರ ವೇಳೆ ಕಾಂಗ್ರೆಸ್ಸಿನ ಗೂಂಡಾಗಳ ಜತೆಗೆ ಪ್ರತಿಭಟನಾ ಸ್ಥಳಕ್ಕೆ ಅವಾಚ್ಯವಾಗಿ ನಿಂದಿಸಿಕೊಂಡೇ ಬಂದ ಶಾಂತನಗೌಡ, ಕಾಂಗ್ರೆಸ್ಸಿನ ಇತರರು ಹೋರಾಟಗಾರರಿಗೆ ತುಚ್ಛವಾಗಿ ಮಾತನಾಡಿದರು ಎಂದು ದೂರಿದರು.ಬಿಹಾರ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ಏನಾಗಿದೆ ಕಂಡಿದ್ದೀರಿ. ಅದೇ ಪರಿಸ್ಥಿತಿಯೇ ಹೊನ್ನಾಳಿ ಕ್ಷೇತ್ರ, ದಾವಣಗೆರೆ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಆಗಲಿದೆ. ಹಿಮಾಚಲ ಪ್ರದೇಶ, ತೆಲಂಗಾಣ ಸರ್ಕಾರ ಪಾಪರ್ ಆಗಿದ್ದು, ಕರ್ನಾಟಕವೇ ಸದ್ಯ ನಿಮಗೆ ಎಟಿಎಂ ಆಗಿದೆ. ಪ್ರಾದೇಶಿಕ ಪಕ್ಷಗಳಿಗಿಂತಲೂ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್, ರಾಜು ವೀರಣ್ಣ, ಪಂಜು ಪೈಲ್ವಾನ, ದಯಾನಂದ, ಚೇತನ, ರವಿಗೌಡ, ಅಜಯಕುಮಾರ, ತಾರೇಶ ನಾಯ್ಕ ಇತರರು ಇದ್ದರು.ನಾವೆಲ್ಲಾ ರೈತ ಕುಟುಂಬದವರು. ನನ್ನ ತಂದೆ, ತಾಯಿಗೆ ಸೇರಿದ 23 ಎಕರೆ ನಾನು ಶಾಸಕನಾಗುವ ಮುಂಚೆಯಿಂದಲೂ ಇದೆ. ರೈತರ ಪರವಾಗಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ. ದಾವಣಗೆರೆ ಜಿಲ್ಲೆಯಲ್ಲೂ ಹೋರಾಟ ನಡೆಸುವ ಬಗ್ಗೆ ಇದೇ ಶನಿವಾರ ಬಿಜೆಪಿ ಜಿಲ್ಲಾ ಘಟಕ ಸಭೆ ನಡೆಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸಲಿದೆ.
ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.