ಸಿದ್ದರಾಮಯ್ಯ ಕ್ಷಮೆ ಕೇಳಲಿ: ಜೋಶಿ

KannadaprabhaNewsNetwork | Updated : Jan 06 2024, 04:46 PM IST

ಸಾರಾಂಶ

ಸರ್ಕಾರ ಕಾನೂನು ರೀತಿಯಲ್ಲಿ ನಡೆದುಕೊಳ್ಳುತ್ತದೆ. ನಾವು ಹಿಂದೂ ವಿರೋಧಿಗಳಲ್ಲ ಎಂದು ಹೇಳಿತ್ತು. ಆದರೆ, ಇಂದು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಜೋಶಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಯೋಧ್ಯಾ ಗಲಭೆ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಖುಲಾಸೆ ಆಗಿದ್ದಾರೆ. ಕೇಸ್‌ನ ಎಫ್‌ಐಆರ್ ಕೂಡಾ ಇಲ್ಲ. ಅದಕ್ಕೆ ನ್ಯಾಯಾಲಯ ಜಾಮೀನು ನೀಡಿದೆ. ಯಾವುದೇ ಆಧಾರ ಇಲ್ಲದೇ ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.

ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾನೂನು ರೀತಿಯಲ್ಲಿ ನಡೆದುಕೊಳ್ಳುತ್ತದೆ. ನಾವು ಹಿಂದೂ ವಿರೋಧಿಗಳಲ್ಲ ಎಂದು ಹೇಳಿತ್ತು. ಆದರೆ, ಇಂದು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿದೆ. ನಾವು ಪ್ರತಿಭಟನೆ ಮಾಡದಿದ್ದರೆ ಇನ್ನೂ ಅನೇಕ ಹಿಂದೂಗಳನ್ನು ಸರ್ಕಾರ ಬಂಧಿಸುತ್ತಿತ್ತು ಎಂದರು.

ಶ್ರೀಕಾಂತ ಪೂಜಾರಿ ಬಂಧನ ಮಾಡಲು ಯಾವುದೇ ದಾಖಲೆ ಇರಲಿಲ್ಲ. ಬಿಜೆಪಿ ಕಾಲದಲ್ಲಿ ರಾಮಮಂದಿರ ಆಗುತ್ತದೆ ಎನ್ನುವ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಬಂಧನ ಮಾಡಿದ್ದಾರೆ. ಇದೀಗ ಪೂಜಾರಿಗೆ ಕೋರ್ಟ್ ಜಾಮೀನು ನೀಡುವ ಮೂಲಕ ಕಾಂಗ್ರೆಸ್ ಹೇಳಿರುವುದು ಸುಳ್ಳು ಎಂಬುದು ಸಾಬೀತಾದಂತಾಗಿದೆ ಎಂದು ಹೇಳಿದರು.

ಅದು ಅಲ್ಲದೇ ಪೊಲೀಸ್ ಕಮೀಷನರ್‌ ಅನೇಕ ಹಿಂದೂ ಹೋರಾಟಗಾರರನ್ನು ಕರೆಸಿದ್ದರು. ಆಗ ನಾನೇ ಕಮೀಷನರ್ ಜತೆ ಮಾತನಾಡಿ ಹಿಂದೂಗಳನ್ನು ಬಂಧಿಸದಂತೆ ಮನವಿ ಮಾಡಿದ್ದೆ. ಒಂದು ವೇಳೆ ಬಂಧಿಸಿದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದೆ. ಆದಾಗ್ಯೂ ಸರಕಾರವೇ ಮುಂದೆ ನಿಂತು ಹಿಂದೂ ಹೋರಾಟಗಾರನ್ನು ಬಂಧನ ಮಾಡಿದೆ. ಇಷ್ಟೇ ಅಲ್ಲದೇ ಅವನ ಮೇಲೆ ಬೇರೆ ಬೇರೆ ಕೇಸ್‌ಗಳಿವೆ ಎಂದು ಹೇಳಿದರು. ಕೇಸ್‌ಗಳಿದ್ದರೆ ನಿಮ್ಮ ಇಂಟಲಿಜೆನ್ಸಿ ಕತ್ತೆ ಕಾಯುತ್ತಿದೆಯೇ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾಗೂ ಗೃಹ ಸಚಿವರಿಗೆ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕಾಂಗ್ರೆಸ್‌ಗೆ ಆಡಳಿತ ಮಾಡುವ ಯೋಗ್ಯತೆ ಇಲ್ಲದೇ ಕೇವಲ ಹಿಂದೂಗಳನ್ನು ಹತ್ತಿಕ್ಕುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಶ್ರೀಕಾಂತ ಪೂಜಾರಿ ಪ್ರಕರಣದಲ್ಲಿ ಕೇಂದ್ರ ಸಚಿವ ಜೋಶಿ ಕೈವಾಡವಿದೆ ಎಂದು ಜಗದೀಶ ಶೆಟ್ಟರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ ನೀಡಿರುವ ಬಾಲೀಶ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ಶೆಟ್ಟರ ಬಿಜೆಪಿಯಲ್ಲಿದ್ದಾಗ ರಾಮಮಂದಿರ, ಮೋದಿ ಅವರ ಬಗ್ಗೆ ಏನು ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ವಿಪಕ್ಷ ನಾಯಕರು, ಶಾಸಕರು ಹಾಗೂ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಇವರು ಎಷ್ಟೇ ಎಫ್‌ಐಆರ್ ದಾಖಲಿಸಿದರೂ ಜನರೇ ಅದಕ್ಕೆ ಸೂಕ್ತ ಉತ್ತರ ಕೊಡುತ್ತಾರೆ ಎಂದ ಅವರು, 16 ಕೇಸ್‌ಗಳ ಬಗ್ಗೆ ಮಾತನಾಡಿದಾಗ ಜೋಶಿಯವರೇನು ಜಡ್ಜಾ ಎಂದು ಸಿಎಂ ಪ್ರಶ್ನಿಸಿದ್ದರು. ಇದೀಗ ನಾನು ಕೇಳುತ್ತೇನೆ. ನೀವೇನು ಜಡ್ಜಾ? ಪರಿಶೀಲನೆ ನಡೆಸಿ ಕೇಸ್‌ಗಳ ಬಗ್ಗೆ ಮಾತನಾಡಬೇಕೆಂಬ ಜ್ಞಾನ ಇರಲಿಲ್ಲವೇ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

Share this article