ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Aug 30, 2024, 01:10 AM ISTUpdated : Aug 30, 2024, 12:20 PM IST
ಪೊಟೋ೨೯ಎಸ್.ಆರ್.ಎಸ್೧ (ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾಧ್ಯಮದವರ ಜತೆ ಮಾತನಾಡಿದರು.) | Kannada Prabha

ಸಾರಾಂಶ

ದ್ವೇಷದ ರಾಜಕಾರಣಕ್ಕೆ ಬಿಜೆಪಿ ಪಾದಯಾತ್ರೆ ನಡೆಸಿಲ್ಲ. ಹಗರಣದ ಕುರಿತು ತನಿಖೆಯಾಗಿ ಶಿಕ್ಷೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಶಿರಸಿ: ಮುಡಾ, ವಾಲ್ಮೀಕಿ ಹಗರಣದ ದೂರು ಬಂದಾಗ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

ಗುರುವಾರ ಮಾಧ್ಯಮದವರ ಜತೆ ಮಾತನಾಡಿ, ದ್ವೇಷದ ರಾಜಕಾರಣಕ್ಕೆ ಬಿಜೆಪಿ ಪಾದಯಾತ್ರೆ ನಡೆಸಿಲ್ಲ. ಹಗರಣದ ಕುರಿತು ತನಿಖೆಯಾಗಿ ಶಿಕ್ಷೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿದೆ ಎಂದರು.

ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ವಿರುದ್ಧ ಆಡಳಿತ ಪಕ್ಷ ಸಮಾವೇಶ ನಡೆಸಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇತ್ತೀಚೆಗೆ ವಾಲ್ಮೀಕಿ ನಿಗಮದ ಅಧಿಕಾರಿ ಹಾಗೂ ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಕುರಿತು ಬೀದಿಯಲ್ಲಿ ಹೋಗುವವರು ದೂರು ನೀಡಿದ್ದಾರೆ ಎಂದು ಕಾಂಗ್ರೆಸ್‌ನವರು ಹೇಳಿಕೆ ನೀಡುತ್ತಿದ್ದಾರೆ. ಬೀದಿಯಲ್ಲಿ ಹೋಗುವವರ ಆಶೀರ್ವಾದದಿಂದ ನೀವು ಆಯ್ಕೆಯಾಗಿರುವುದು ಎಂಬುದನ್ನು ಕಾಂಗ್ರೆಸ್‌ನವರು ನೆನಪು ಇಟ್ಟುಕೊಳ್ಳಬೇಕು ಎಂದರು.

ಅಡಕೆ ಕಳ್ಳ ಮಾರ್ಗದ ಮೂಲಕ ದೇಶದ ಒಳಗಡೆ ಬರಬಾರದೆಂದು ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಿದೆ. ಕಳೆದ ವರ್ಷ ಭೀಕರ ಬರಗಾಲ ಹಾಗೂ ಈ ವರ್ಷ ಅತಿಯಾದ ಮಳೆಯಿಂದ ರೈತರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕೊಳೆರೋಗದಿಂದ ಅಡಕೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಕೇಂದ್ರ ಸರ್ಕಾರ ಬಳಿ ವಿನಂತಿಸುತ್ತೇವೆ ಎಂದ ಅವರು, ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ಸರ್ವೆಯಾಗಿದ್ದು, ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಆದಷ್ಟು ಶೀಘ್ರವಾಗಿ ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನ ನಡೆಸುತ್ತೇನೆ ಎಂದರು.

ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಾರಿಕಾಂಬಾ ದೇವಿ ಆಶೀರ್ವಾದಕ್ಕಾಗಿ ಬಂದಿದ್ದೆ. ಚುನಾವಣಾ ಮುಗಿದ ಬಳಿಕ ನಾಲ್ಕನೇ ಬಾರಿ ಸಂಸದನಾಗಿ ಮಾರಿಕಾಂಬಾ ದೇವಿಯ ಆಶೀರ್ವಾದಕ್ಕಾಗಿ ಬಂದಿದ್ದೇನೆ. ಚಾತುರ್ಮಾಸ ವ್ರತಾಚರಣೆಯಲ್ಲಿರುವ ಗುರುಗಳ ಭೇಟಿ ಮಾಡಿ, ಆಶೀರ್ವಾದ ಪಡೆಯಲು ಮಠಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಗ್ರಾಮೀಣ ಮಂಡಾಲಧ್ಯಕ್ಷೆ ಉಷಾ ಹೆಗಡೆ ಮತ್ತಿತರರು ಇದ್ದರು.

ಛತ್ರಿ ಹಿಡಿಯುವ ಶಾಸಕ

ಸರ್ಕಾರ ಬದಲಾದಾಗ ತಮ್ಮ ಕೆಲಸಕ್ಕಾಗಿ ಛತ್ರಿ ಹಿಡಿಯುವ ಶಾಸಕರು ನಮ್ಮ ನಡುವೆ ಇದ್ದಾರೆ. ಕಮಲದ ಹೂವಿನ ಚಿಹ್ನೆಯಡಿ ಗೆದ್ದವರು ಪಕ್ಷ ವಿರೋಧಿ ಹೇಳಿಕೆ ನೀಡಬಾರದು ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!