ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ಕಾಗೇರಿ

KannadaprabhaNewsNetwork | Published : Oct 9, 2024 1:30 AM

ಸಾರಾಂಶ

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ರಾಜ್ಯದ ಗೌರವ ಎತ್ತಿ ಹಿಡಿಯಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇದ್ದರೆ ಮುಡಾ ಪ್ರಕರಣದ ತನಿಖಾಧಿಕಾರಿಗಳು ಒತ್ತಡದಿಂದ ಹೊರಗಿದ್ದು, ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.ನಗರಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ರಾಜ್ಯದ ಗೌರವ ಎತ್ತಿ ಹಿಡಿಯಬೇಕು. ಕೂಡಲೇ ರಾಜೀನಾಮೆ ಕೊಡಬೇಕು ಎನ್ನುವ ಜನಾಭಿಪ್ರಾಯ ಕೂಡಾ ರೂಪಿತವಾಗಿದೆ. ತನಿಖೆಗೆ ಯಾವುದೇ ಪ್ರಭಾವ ಬೀರದಂತೆ ಸಹಕರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ವಿರುದ್ಧ ತನಿಖೆ ನಡೆಸುವುದು ಅಧಿಕಾರಿಗಳಿಗೆ ಒತ್ತಡ ಉಂಟಾಗುತ್ತದೆ. ಪ್ರಜಾಪ್ರಭುತ್ವದ, ಸಂವಿಧಾನದ ಶ್ರೇಷ್ಠ ಹುದ್ದೆಯಲ್ಲಿರುವ ರಾಜ್ಯಪಾಲರ, ನ್ಯಾಯಾಂಗದ ನಿರ್ಣಯವನ್ನು ಗೌರವಿಸಬೇಕು. ಅವರ ಹಿರಿತನಕ್ಕೆ ಇದು ಶೋಭೆ ತರುವಂತದ್ದಲ್ಲ ಎಂದರು.ಜಮ್ಮು- ಕಾಶ್ಮೀರ, ಹರಿಯಾಣ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ಕೊಟ್ಟ ತೀರ್ಮಾನವನ್ನು ಗೌರವದಿಂದ ಸ್ವೀಕರಿಸುತ್ತೇವೆ ಎಂದಷ್ಟೆ ಹೇಳಿದರು. ರಾಜ್ಯ ಸರ್ಕಾರ ಅಸ್ಥಿರಗೊಳಿಸುವುದು ಬಿಜೆಪಿಯ ಉದ್ದೇಶ: ರವೀಂದ್ರ ನಾಯ್ಕ

ಶಿರಸಿ: ಮೌಲ್ಯಾಧಾರಿತ ರಾಜಕಾರಣದಲ್ಲಿ ರಾಜೀನಾಮೆ ಕೇಳುವುದು ಫ್ಯಾಷನ್ ಆಗಿದ್ದು, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ. ಈ ಕಾರಣಕ್ಕಾಗಿ ರಾಜ್ಯಪಾಲರ ಅಧಿಕಾರವನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಜಂಟಿ ತಂತ್ರದ ಮೇಲೆ ಈ ರೀತಿ ವ್ಯವಸ್ಥಿತವಾಗಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡಬೇಕಿತ್ತು. ರಾಜ್ಯಪಾಲರು ಅತ್ಯಂತ ಆತುರ ಮತ್ತು ಅಸಂವಿಧಾನಿಕವಾಗಿ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಆತುರದ ಕ್ರಮವನ್ನು ರಾಜ್ಯಪಾಲರು ತೆಗೆದುಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆಯಾಗಿ ವಿಚಾರಣೆಯಾಗಬೇಕು. ಮುಡಾ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರ ನಡೆದಿಲ್ಲ. ಆದರೂ ಒತ್ತಡದ ಮೇಲೆ ಇಡಿ ತನಿಖೆ ನಡೆಸುತ್ತಿದ್ದಾರೆ. ಜಾಗೃತ ವಕೀಲರ ವೇದಿಕೆಯಿಂದ ಮುಡಾ ಪ್ರಕರಣ ಕೋರ್ಟ್‌ ಆದೇಶಗಳು, ಸತ್ಯಾಸತ್ಯತೆ ತಿಳಿಸುವ ಉದ್ದೇಶ ಮಾಡಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ವಕೀಲ ರಾಜೇಶ ಶೆಟ್ಟಿ, ವೆಂಕಟೇಶ ಹೆಗಡೆ ಹೊಸಬಾಳೆ, ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು, ಬಾಬು ಗೌಡ, ಜ್ಯೋತಿ ಪಾಟೀಲ್, ಪ್ರಸನ್ನ ಶೆಟ್ಟಿ ಮತ್ತಿತರರು ಇದ್ದರು.

Share this article