ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ತೊಗರಿ ಬೆಳೆಗೆ ನ್ಯಾಯಸಮ್ಮತ ಮತ್ತು ಪಾರದರ್ಶಕ ಬೆಲೆ ನಿಗದಿಪಡಿಸಿ ಸರ್ಕಾರ ಆರಂಭಿಸಿದ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಲಿ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಸಲಹೆ ನೀಡಿದರು.ನಗರದ ವಿದ್ಯಾ ನಗರದ ತ್ರಿವೇಣಿ ಕಾಂಪ್ಲೆಕ್ಷ್ ಆವರಣದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯಿಂದ ಆರಂಭಿಸಲಾದ ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ವೈಜ್ಞಾನಿಕ ಬೆಲೆ ಸಿಗದೆ ಹೈರಾಣಾಗಿದ್ದ ತೊಗರಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಬೆಲೆಯಾದರೂ ಸಿಗಬೇಕೆಂಬ ಉದ್ದೇಶದಿಂದ ಜಾರಿ ಮಾಡಿದ ಯೋಜನೆಯ ಪ್ರಯೋಜನವನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂಬ ಉದ್ದೇಶದಿಂದ ದಾಸೋಹಿ ಕಂಪನಿ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಹೆಚ್ಚಿನ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಶಿವಾನಂದ ಗೋಠೆ ಮಾತನಾಡಿ, ತೊಗರಿ ಬೆಳೆಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ಜಿಲ್ಲಾದ್ಯಂತ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಈಗಾಗಲೆ ಹಲವು ಕಡೆ ಗರಿಷ್ಠ ಮಟ್ಟದಲ್ಲಿ ಖರೀದಿ ನಡೆಯುತ್ತಿದ್ದು, ಈ ಮಧ್ಯೆ ದಾಸೋಹಿ ರೈತ ಉತ್ಪಾದಕ ಕಂಪನಿ ಅತ್ಯಂತ ಕಡಿಮೆ ಅವಧಿಯಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಖರೀದಿ ಆರಂಭಿಸಿ ರೈತರ ಮನೆ ಬಾಗಿಲಿಗೆ ಸೇವೆ ನೀಡುವ ಬದ್ದತೆ ತೋರಿದೆ ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ, ರೈತ ಉತ್ಪಾದಕ ಕಂಪನಿಗಳ ಸ್ಥಾಪನೆಯ ಹಿಂದಿನ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ರೈತ ಉತ್ಪಾದಕ ಸಂಸ್ಥೆಗಳಲ್ಲಿ ದಾಸೋಹಿ ಎಫ್.ಪಿ.ಒ ಹೆಸರು ಮಾಡುತ್ತಿರುವುದು ಈ ಭಾಗದ ಹೆಮ್ಮೆ. ನಾವೆಲ್ಲ ಸೇರಿ ಇನ್ನಷ್ಟು ಬೆಂಬಲಿಸಿದಲ್ಲಿ ರಾಷ್ಟ್ರ ಮಟ್ಟದಲ್ಲಿ ನಂಬರ ಒನ್ ಆಗಲಿದೆ ಎಂದು ಹೇಳಿದರು.ಪ್ರಾರಂಭೋತ್ಸವದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಗುರು ತಾರನಾಳ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ತಾಳಿಕೋಟಿ ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ, ಎಪಿಎಂಸಿ ನಿವೃತ್ತ ಅಧಿಕಾರಿ ಜಿ.ಎಂ ಯಡವಣ್ಣವರ, ವಿಶ್ರಾಂತ ಉಪ ತಹಸೀಲ್ದಾರ್ ಆರ್.ಬಿ ಸಜ್ಜನ, ಅಡತ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಲ್ ಬಿರಾದಾರ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಂಪನಿ ನಿರ್ದೇಶಕರಾದ ಕಲ್ಲಣ್ಣ ಪ್ಯಾಟಿ, ಗೋಲಪ್ಪ ಗಂಗನಗೌಡ್ರ, ಆನಂದ ಸೂಳಿಭಾವಿ, ಭೀಮಣ್ಣ ಮಳಗೌಡರ, ಗುರಯ್ಯ ಮುದ್ದನೂರಮಠ, ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾದ ಬಿ.ಎಂ.ಪಾಟೀಲ, ಶಿವು ಕತ್ತಿ, ಬಿ.ಎಸ್.ಪಾಟೀಲ, ಬಸವರಾಜ ನರಸಣಗಿ ಸೇರಿದಂತೆ ಕಂಪನಿಯ ರೈತರು ಭಾಗಿಯಾಗಿದ್ದರು. ಮಂಜುನಾಥ ದೊಡಮನಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗುಂಡಪ್ಪ ಬಿರಾದಾರ ನಿರೂಪಿಸಿದರು, ಮಲ್ಲು ಕಾನ್ನಾಳ ವಂದಿಸಿದರು.