ಕೋವಿಡ್ ಹಗರಣ ಯಾರಿಂದದ್ರೂ ತನಿಖೆ ಮಾಡಿಸಲಿ: ಸಂಸದ ಡಾ.ಕೆ. ಸುಧಾಕರ್‌

KannadaprabhaNewsNetwork | Published : Nov 16, 2024 12:30 AM

ಸಾರಾಂಶ

ಜನರ ದೃಷ್ಟಿಯಲ್ಲಿ ನಮ್ಮನ್ನು ಖಳ ನಾಯಕರೆಂದು ಬಿಂಬಿಸಲು ಹೊರಟಿದ್ದಾರೆ. ಇವರಿಗೆ ಒಳ್ಳೆದಾಗುವುದಿಲ್ಲ ಎಂದು ಸಂಸದ ಕೆ. ಸುಧಾಕರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೋವಿಡ್ ಸಮಯದ ಹಗರಣ ಆರೋಪಗಳನ್ನು ರಾಜ್ಯ ಸರ್ಕಾರ ಯಾರ‍್ಯಾರಿಂದ ತನಿಖೆ ಮಾಡಿಸುತ್ತೋ ಮಾಡಿಸಲಿ. ಸರ್ಕಾರ ಕೋವಿಡ್ ಹಗರಣಗಳ ಬಗ್ಗೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕು. ಜನರ ದೃಷ್ಟಿಯಲ್ಲಿ ನಮ್ಮನ್ನು ಖಳ ನಾಯಕರೆಂದು ಬಿಂಬಿಸಲು ಹೊರಟಿದ್ದಾರೆ. ಇವರಿಗೆ ಒಳ್ಳೆದಾಗುವುದಿಲ್ಲ. ಯಾವಾಗಲೂ ಕಾಲಚಕ್ರ ತಿರುಗುತ್ತಾ ಇರುತ್ತದೆ. ಆಗ ಯಾರ್ಯಾರು ಎಲ್ಲಿ ಇರುತ್ತಾರೆಂಬುದನ್ನು ನೋಡೋಣ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣದ ಬಗ್ಗೆ ಪದೇ ಪದೇ ತನಿಖೆ ಆಯಾಮಗಳನ್ನು ಮಾರ್ಪಾಡು ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದರು.ಕೋವಿಡ್ ಸಮಯದಲ್ಲಿ ಪಿಪಿಇ ಕಿಟ್‌ಗಳ ಖರೀದಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಎಷ್ಟು ಜನರಿಂದ ತನಿಖೆ ನಡೆಸುತ್ತದೆಯೋ ಗೊತ್ತಾಗುತ್ತಿಲ್ಲ. ಮೊದಲು ನ್ಯಾಯಮೂರ್ತಿ ಕುನ್ಹಾ ಅವರ ಆಯೋಗದಿಂದ ತನಿಖೆ ಮಾಡಿಸಿದರು. ಆಯೋಗ ಪ್ರಾಥಮಿಕ ವರದಿ ಸಲ್ಲಿಸುತ್ತಿದ್ದಂತೆಯೇ ಅದರ ಆಧಾರದ ಮೇಲೆ ತನಿಖೆ ನಡೆಸಲು ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಮತ್ತೊಂದು ಸಮಿತಿಯ ರಚನೆಯಾಯಿತು, ಈಗ ಒಂದು ಎಸ್​ಐಟಿಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ಕೋವಿಡ್ ಪ್ರಾರಂಭದ ಸಮಯದಲ್ಲಿ ಪಿಪಿಇ ಕಿಟ್ ಗಳನ್ನು ರಾಜ್ಯಕ್ಕೆ ತರಿಸಿದಾಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹಾಗೂ ಬಿ.ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. ಪಿಪಿಇ ಕಿಟ್ ತರಿಸುವ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದಲ್ಲ, ತಾಂತ್ರಿಕ ಸಮಿತಿ ಮತ್ತು ಟಾಸ್ಕ್ ಫೋರ್ಸ್ ಜೊತೆ ಚರ್ಚೆ ನಡೆಸಿ ಕೇಂದ್ರ ಸರ್ಕಾರದಿಂದ ವಿಶೇಷ ವಿಮಾನ ಚೀನಾಗೆ ಕಳಿಸಿ ತರಿಸಿದ್ದು, ಆಗ ಕೇವಲ ಕರ್ನಾಟಕದಲ್ಲಿ ಮಾತ್ರ ಪಿಪಿಇ ಕಿಟ್ ಲಭ್ಯವಿದ್ದವು ಎಂದು ಹೇಳಿದರು.

ಕೋವಿಡ್ ತನಿಖೆಗೆ ನ್ಯಾ. ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆ ತನಿಖೆ ಪೂರ್ಣವೇ ಆಗಿಲ್ಲ. ಪೂರ್ಣಯಾಗದೆ ಅವರ ಹತ್ತಿರ ಪ್ರಾಥಮಿಕ ವರದಿ ತರಿಸಿಕೊಂಡು ಅದರ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ 7 ಮಂದಿ ಪ್ರಭಾವಿ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿ, ಅವರಿಗೂ ವರದಿ ನೀಡುವಂತೆ ಆದೇಶಿಸಿದೆ ಎಂದರು.

ಇದಾದ ತಿಂಗಳ ಕಳೆಯುವುದರಲ್ಲಿ ಈಗ ಎಸ್‌ಐಟಿ ತನಿಖೆ ರಚನೆ ಮಾಡಲಾಗಿದೆ. ಇಡೀ ಪ್ರಪಂಚದಲ್ಲಿ ಕೋವಿಡ್ ಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಅವತ್ತು ಯಾವುದು ಎಷ್ಟು? ಅಥವಾ ಅವತ್ತಿನ ಪರಿಕರಗಳು ಸಿಗುತ್ತಿತ್ತಾ, ಇಲ್ಲವಾ ಎಂದು ಇವರು ಹೇಳಲಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದರು.

ಈ ವೇಳೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಖಾದಿ ಮಂಡಲಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್,ಮತ್ತಿತರರು ಇದ್ದರು.ಕೋಟ್‌.....

ಕರ್ನಾಟಕಕ್ಕೆ ಬಂದ ದಿನ ದೇಶದ ಯಾವ ರಾಜ್ಯಕ್ಕೆ ಪಿಪಿಇ ಕಿಟ್ ಬಂದಿತ್ತು ಎಂಬುದನ್ನು ಇವರು ಹೇಳಲಿ ನೋಡೋಣ. ಆಗ ಕೋವಿಡ್‌ಗೆ ಹೆದರಿ ಪಾಪ ಮನೆಗಳಲ್ಲಿ ಇದ್ದವರಿಗೆ ಈಗ ಅಧಿಕಾರ ಸಿಕ್ಕಿದೆ.

ಡಾ.ಕೆ.ಸುಧಾಕರ್, ಸಂಸದ

ಸಿಕೆಬಿ-7 ಸುದ್ದಿಗಾರರೊಂದಿಗೆ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.

Share this article