- ಮೃತನ ಕುಟುಂಬಕ್ಕೆ ನ್ಯಾಯ ನೀಡಲು ಅಭಾಲಿಂವೀ ಮಹಾಸಭಾ ಯುವ ಘಟಕ ಆಗ್ರಹ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ.12ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ವಾಸಿ ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಬೆಂಗಳೂರಿಗೆ ಕರೆದೊಯ್ದು ಹತ್ಯೆ ಮಾಡಿ, ಚರಂಡಿಯಲ್ಲಿ ಬಿಸಾಕಿಹೋಗಿದ್ದ ಚಿತ್ರನಟ ದರ್ಶನ್ ಅಭಿಮಾನಿಗಳು ಸೇರಿದಂತೆ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ರಿಗೆ ಘಟಕದ ಪದಾಧಿಕಾರಿಗಳ ನಿಯೋಗ ಮನವಿ ಅರ್ಪಿಸಿ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಿಗಳು, ಘಟನೆ ಸೂತ್ರದಾರರು, ಕೃತ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾರೇ ಇದ್ದರೂ, ಎಷ್ಟೇ ಶಕ್ತಿಶಾಲಿ, ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮೃತ ರೇಣುಕಾಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವರ್ಷವಷ್ಟೇ ಆತನ ಮದುವೆಯಾಗಿತ್ತು. ಮೃತನ ಗರ್ಭಿಣಿ ಪತ್ನಿ, ಆತನ ತಂದೆ, ತಾಯಿಗೆ ನ್ಯಾಯ ಕೊಡಿಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ರೇಣುಕಾಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ, ಹತ್ಯೆ ಮಾಡಿರುವ ಹಂತಕರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮನವಿ ಅರ್ಪಣೆ ವೇಳೆ ಅಭಾಲಿಂವೀಮ ಯುವ ಘಟಕದ ಮುಖಂಡರಾದ ಶಿವರತನ್, ಜೆ.ಶಿವರಾಜ, ಅಜಿತ್ ಅಲೂರು, ಸಂತೋಷ ಅಣಬೇರು, ಅನಿಲ್, ಬಸವರಾಜ ಇತರರು ಇದ್ದರು.
- - - -12ಕೆಡಿವಿಜಿ9:ಚಿತ್ರದುರ್ಗದ ರೇಣುಕಾಸ್ವಾಮಿ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಅಭಾಲಿಂವೀಮ ಯುವ ಘಟಕ ನಿಯೋಗ ಮನವಿ ಅರ್ಪಿಸಿತು.