ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು ಒಂದು ದಿನದ ತರಬೇತಿ ಕಾರ್ಯಾಗಾರ
ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಾನಂದ ನಾಯಕ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಎಂ. ಉಷಾ ಯೋಜನೆಯ ಆಶ್ರಯದಡಿ ಬುಧವಾರ ನಡೆದ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು ಎಂಬ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸುವ ಮೂಲಕ ಬೌದ್ಧಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಆಗ ಭವಿಷ್ಯದ ಜೀವನವನ್ನು ಸದೃಢವಾಗಿ ಕಟ್ಟಲು ಸಾಧ್ಯ. ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಈ ಅವಕಾಶವನ್ನು ಅಪ್ಪಿಕೊಳ್ಳಲು ಈಗಿಂದಲೇ ಅಣಿಯಾಗಬೇಕು. ಈ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರವು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ, ಭವಿಷ್ಯದ ಈ ನಾಡಿನ ಪ್ರಜ್ಞಾವಂತ ನಾಗರಿಕರಾಗಬೇಕಾದ ವಿದ್ಯಾರ್ಥಿಗಳು ಕನಸನ್ನು ಹೊಂದಿರಬೇಕು. ಅದನ್ನು ನನಸಾಗಿಸಲು ಸದಾ ಪ್ರಯತ್ನಶೀಲರಾಗಬೇಕು ಎಂದರು.
ವರ್ಷಾ ಕೋಲೆ ಪ್ರಾರ್ಥಿಸಿದರು. ಪ್ರಾಧ್ಯಾಪಕ ಮನೋಹರ ಉಡಚಂಚಿ ಸ್ವಾಗತಿಸಿದರು. ಪ್ರಾಧ್ಯಾಪಕಿ ನಿಶಾತ್ ಶರೀಫ್ ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಚಾಲಕಿ ತಸ್ಲಿಮಾ ಜೋರುಂ ವಂದಿಸಿದರು. ಉಪನ್ಯಾಸಕ ಉಮೇಶ ಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಧಾರವಾಡದ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು: ಪೂರ್ವ ಸಿದ್ಧತೆಯ ಬಗ್ಗೆ, ಹಿರಿಯ ಪತ್ರಕರ್ತೆ ಸಿ.ಜಿ. ಮಂದಾಕಿನಿ ಪತ್ರಿಕಾ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು ಹಾಗೂ ಗುಲ್ಬರ್ಗದ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕ ಡಾ. ಅರುಣ್ ಜೋಳದ ಕೂಡ್ಲಗಿ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಾವಕಾಶಗಳು ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.