ಹಾವೇರಿ: ಓದುವ ಸಮಯದಲ್ಲಿ ನಿಯತ್ತಿನಿಂದ ಪುಸ್ತಕದ ಜತೆಗೆ ಗೆಳೆತನ ಮಾಡಿದರೆ ಮುಂದೆ ಒಂದು ದಿನ ಇಡೀ ಜಗತ್ತು ನಮ್ಮ ಸ್ನೇಹಕ್ಕಾಗಿ ಕಾಯುವ ಹಾಗೆ ಪುಸ್ತಕ ಮಾಡುತ್ತದೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಶಾಂತಾದೇವಿ ಟಿ. ತಿಳಿಸಿದರು.ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಏಪರ್ಡಿಸಿದ್ದ ಒಂದು ದಿನದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಜ್ಞಾನದಾಹ ತೀರಿಸುವಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದಾಗಿದ್ದು, ಗ್ರಂಥಪಾಲಕರು ಗ್ರಂಥಾಲಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಜ್ಞಾನದಾಹ ತೀರಿಸುವ ಕೆಲಸ ಮಾಡುತ್ತಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಂದಾಗಿ ಜಗತ್ತು ಚಿಕ್ಕದಾಗಿ ತೋರುತ್ತಿದೆ. ಜ್ಞಾನದ ವಿಸ್ತರಣೆಯಲ್ಲಿ ತೊಡಗಿರುವ ಗ್ರಂಥಪಾಲಕರು ಹೊಸ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಾಧ್ಯಾಪಕ ರಮೇಶ ನಾಯಕ ಮಾತನಾಡಿ, ಕೋಶಗಳ ಭಂಡಾರದ ಸಂಗ್ರಹಾಲಯವೇ ಈ ಗ್ರಂಥಾಲಯ. ಈ ಗ್ರಂಥಾಲಯದ ರಕ್ಷಕರೇ ಈ ಗ್ರಂಥ ಪಾಲಕರು. ಅಂಥ ಗ್ರಂಥ ಪಾಲಕರಲ್ಲಿ ಒಬ್ಬರಾಗಿ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎನಿಸಿಕೊಂಡ ಎಸ್.ಆರ್. ರಂಗನಾಥ್ ಅವರ ಗೌರವ ಪೂರ್ವಕವಾಗಿ ಆ. 12ರಂದು ರಾಷ್ಟ್ರೀಯ ಗ್ರಂಥ ಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಯುವಪೀಳಿಗೆಗೆ ಪುಸ್ತಕಗಳ ಮಹತ್ವವನ್ನು ತಿಳಿಸುವಂತಹ ಕೆಲಸ ಗ್ರಂಥಾಲಯದಿಂದ ಆಗಬೇಕಿದೆ ಎಂದರು.
ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ರವೀಂದ್ರಕುಮಾರ ಬಣಕಾರ, ಡಾ. ಕವಿತಾ ನಾಯಕ, ರಂಜಿತಾ ಜಗಣ್ಣನವರ ಇದ್ದರು. ಪ್ರೊ. ಗೀತಾ ಬೆಳಗಾವಿ ಸ್ವಾಗತಿಸಿದರು. ತೃಪ್ತಿ ಕಟಾರಿ ಪ್ರಾರ್ಥಿಸಿದರು. ಪ್ರೊ. ಸಂಗೀತ ಬೆಳವತ್ತಿ ನಿರೂಪಿಸಿದರು.