ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲಿ: ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

KannadaprabhaNewsNetwork |  
Published : Mar 08, 2024, 01:51 AM IST
೫ಎಚ್‌ವಿಆರ್೬ | Kannada Prabha

ಸಾರಾಂಶ

ಸರ್ಕಾರ ವಿವಿಧ ಯೋಜನೆಗಳಡಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಸರ್ಕಾರ ವಿವಿಧ ಯೋಜನೆಗಳಡಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ತಾಲೂಕಿನ ದೇವಗಿರಿಯಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೨-೨೩ನೇ ಸಾಲಿನ ರಾಜ್ಯ ವಲಯ ವಿವೇಕ ಯೋಜನೆ ಅಡಿ ಎರಡು ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಮೊಟ್ಟೆ, ಚಕ್ಕಿ, ಪೌಷ್ಟಿಕಾಂಶವುಳ್ಳ ಆಹಾರ, ಉಚಿತ ಶೂ ಮತ್ತು ಸಾಕ್ಸ್, ಸಮವಸ್ತ್ರ‍್ರ, ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ಶಿಕ್ಷಣವಂತರಾಗಿ ಮಾಡಬೇಕು ಎಂದು ಹೇಳಿದರು.

ದೇವಗಿರಿಯಲ್ಲಾಪುರ ಗ್ರಾಮವು ಜಿಲ್ಲಾ ಕೇಂದ್ರ, ಜಿಲ್ಲಾ ಆಡಳಿತ, ವೈದ್ಯಕೀಯ ಕಾಲೇಜ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಜಿಲ್ಲೆಯ ಪ್ರಮುಖ ಆಡಳಿತ ಕೇಂದ್ರಗಳ ಭಾಗವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಇನ್ನಷ್ಟು ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಲಿದೆ. ಗ್ರಾಮದ ಕೆರೆ ತುಂಬಿಸುವ ಯೋಜನೆಯ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಆ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಶಾಲೆಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತುರ್ತಾಗಿ ಕ್ರಮವಹಿಸುವಂತೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ, ಉಪಾಧ್ಯಕ್ಷೆ ಶಿವಲೀಲಾ ತಿರಕಣ್ಣನವರ, ಎಸ್‌ಡಿ ಎಂಸಿ ಅಧ್ಯಕ್ಷ ಹಾಲಪ್ಪ ಭಂಡಾರಿ, ಉಪಾಧ್ಯಕ್ಷ ನಂದಪ್ಪ ಲಮಾಣಿ ಇತರರು ಇದ್ದರು.

ಮುಖ್ಯೋಪಾಧ್ಯಾಯ ಎ.ಪಿ. ಗಡ್ಡದ ಸ್ವಾಗತಿಸಿದರು. ಎಸ್.ಬಿ. ಬಾರ್ಕಿ ಕಾರ್ಯಕ್ರಮ ನಿರ್ವಹಿಸಿದರು. ಕೆ.ಸಿ. ಹಂಜಿ ವಂದಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ