ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸೂರ್ಯ ಘರ್‌ ಅಳವಡಿಕೆಯಾಗಲಿ: ಕುಮಟಾ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಜಯಂತ

KannadaprabhaNewsNetwork | Published : Jan 7, 2025 12:34 AM

ಸಾರಾಂಶ

ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ್ ಮಾತನಾಡಿ, ೨೦೨೪ರಲ್ಲಿ ೫೦ ಜೇನು ಪೆಟ್ಟಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ ಎಂದರು.

ಕುಮಟಾ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಪಂ ಮಾಸಿಕ ಸಭೆಯಲ್ಲಿ ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಲಕ್ಷಾಂತರ ರು. ವಿದ್ಯುತ್ ಬಿಲ್ ವಿಚಾರ ವಿಶೇಷವಾಗಿ ಗಮನ ಸೆಳೆಯಿತು.

ವಿದ್ಯುತ್ ಬಿಲ್ ಬಾಕಿಗೆ ಸಂಬಂಧಿಸಿ ಅಳಲು ತೋಡಿಕೊಂಡ ಹೆಸ್ಕಾಂ ಅಧಿಕಾರಿ, ಗ್ರಾಮ ಪಂಚಾಯಿತಿಗಳ ಹಣ ಸಂದಾಯವಾಗುತ್ತಿಲ್ಲ ಅದರಿಂದ ಸಮಸ್ಯೆ ಉಂಟಾಗಿದೆ. ಅತಿಹೆಚ್ಚು ಎಂದರೆ ಮಿರ್ಜಾನ ಪಂಚಾಯಿತಿ ₹೨೦ ಲಕ್ಷ, ಹೆಗಡೆ ₹೨೧ ಲಕ್ಷ ಬಾಕಿ ಇದೆ. ಒಟ್ಟೂ ₹೬೧,೫೭,೮೩೦ ಪಂಚಾಯಿತಿಗಳ ವಿದ್ಯುತ್ ಬಾಕಿ ಬರಬೇಕಾಗಿದೆ. ಅಲ್ಲದೇ ಕಂದಾಯ ಇಲಾಖೆಯ ₹೧೩ ಲಕ್ಷ ಬಾಕಿ ಇದೆ. ಈಗ ಕರೆಂಟ್‌ ಕಟ್ ಮಾಡಬೇಕಾಗಿದೆ ಎಂದರು. ಹೆಸ್ಕಾಂನಿಂದ ತಾಲೂಕಿನಲ್ಲಿ ೪೧೬೩೦ ಜನರಿಗೆ ಗೃಹಜ್ಯೋತಿ ಯೋಜನೆ ನೀಡಲಾಗಿದೆ. ಪಿಎಂ ಸೂರ್ಯಘರ್ ೭೨ ನೋಂದಣಿಯಾಗಿದೆ ಎಂದರು.ಎಲ್ಲ ಪಂಚಾಯಿತಿ, ಇತರ ಸರ್ಕಾರಿ ಕಚೇರಿಗಳಲ್ಲಿ ಸೂರ್ಯ ಘರ್ ಅಡಿಯಲ್ಲಿ ಸೋಲಾರ್ ಅಳವಡಿಕೆ ಆಗಬೇಕು ಎಂದು ಆಡಳಿತಾಧಿಕಾರಿ ಜಯಂತ ಸೂಚಿಸಿದರು. ಆರೋಗ್ಯ ಇಲಾಖೆ ಪ್ರಗತಿ ಆಲಿಸಿದ ತಾಪಂ ಆಡಳಿತಾಧಿಕಾರಿ, ತಾಲೂಕಿನಲ್ಲಿ ಕ್ಷಯ ರೋಗ ಸಂಪೂರ್ಣ ಮುಕ್ತ ಆಗಿರುವ ಬಗ್ಗೆ ಗ್ರಾಮವಾರು ಬ್ಲೂ ಪ್ರಿಂಟ್ ದಾಖಲಿಸಬೇಕು. ಅರಣ್ಯ ಗ್ರಾಮ ಮೇದಿನಿಗೆ ಆರೋಗ್ಯ ಇಲಾಖೆಯಿಂದ ಪ್ರತಿ ೧೫ ದಿನಗಳಿಗೆ ಒಮ್ಮೆ ಹೋಗಿ ಚಿಕಿತ್ಸೆ ನೀಡಬೇಕು. ಮೇದಿನಿಗೆ ಎಲ್ಲ ಇಲಾಖೆ ಸೌಲಭ್ಯ ದೊರೆಯುವಂತೆ ಕ್ರಮವಾಗಬೇಕು ಎಂದರು. ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಮಾತನಾಡಿ, ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೀಡಾಡಿ ದನಗಳನ್ನು ಒಂದು ವಾರದ ಗಡುವು ನೀಡಿ ಅನೌನ್ಸ್‌ಮೆಂಟ್ ಮಾಡಿ ನಂತರ ಸರ್ಕಾರಿ ಗೋಶಾಲೆಗೆ ಕಳುಹಿಸಲಾಗುತ್ತಿದೆ. ಹಳಿಯಾಳದಲ್ಲಿ ಗೋಶಾಲೆ ಇದೆ. ಹೀಗಾಗಿ ಬೀಡಾಡಿ ದನಗಳ ನಿಯಂತ್ರಣ ಕಷ್ಟಸಾಧ್ಯವಾಗಿದೆ ಎಂದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ್ ಮಾತನಾಡಿ, ೨೦೨೪ರಲ್ಲಿ ೫೦ ಜೇನು ಪೆಟ್ಟಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ, ಜೇನು ಉತ್ಪಾದನೆ ಬಳಿಕ ಮಾರ್ಕೆಟಿಂಗ್ ಲಿಂಕ್ ನೀಡಿ, ಒಂದು ಬ್ರ್ಯಾಂಡ್ ಮಾಡಿ ಮಾರ್ಕೆಟ್ ಮಾಡಲು ಇಲಾಖೆಯಿಂದ ಸಹಕಾರ ನೀಡಬೇಕು. ಸಹಕಾರಿ ಸಂಘ ಮಾಡಿಕೊಂಡು ಜೇನು ಉತ್ಪಾದನೆ ಹೆಚ್ಚಿಸಿ ಮಾರ್ಕೆಟಿಂಗ್ ಮಾಡಲು ಏನು ಮಾಡಬಹುದು ಎಂದು ಸಮಗ್ರ ಯೋಜನೆ ವರದಿ ನೀಡುವಂತೆ ಸೂಚಿಸಿದರು.ಬರೀ ಮೀಟಿಂಗ್‌ ಮಾಡಿ ಕಾಲಹರಣವಾಗದಿರಲಿ

ಸಭೆಯ ಮಧ್ಯದಲ್ಲಿ ಆಗಮಿಸಿದ ಶಾಸಕ ದಿನಕರ ಶೆಟ್ಟಿ, ಮೊದಲು ತಾಲೂಕು ಪಂಚಾಯಿತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸಿ, ಕೇವಲ ಮೀಟಿಂಗ್ ಮಾಡಿ ಕಾಲಹರಣವಾಗಬಾರದು. ಪ್ರಗತಿಯೇ ಇಲ್ಲದ ಮೇಲೆ ಸಭೆ ಯಾಕೆ? ಇಲ್ಲಿರುವ ಅಧಿಕಾರಿಗಳನ್ನು ಕಳಿಸಿಬಿಡಿ. ಸಭೆ ಬರ್ಕಾಸ್ತು ಮಾಡಿ ಎಂದರು. ಪಿಆರ್‌ಇಡಿ ಕಾಮಗಾರಿ ಬದಲಾವಣೆ ಹೊನ್ನಾವರದಲ್ಲಿ ಆಗಿದೆ. ಕುಮಟಾದಲ್ಲಿ ಯಾಕೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ನಂಬರ್ ಕೊಡುತ್ತಿಲ್ಲ ಎಂಬ ದೂರಿದೆ. ಬೇರೆ ತಾಲೂಕುಗಳಲ್ಲಿ ಕೊಡುತ್ತಿದ್ದಾರೆ. ಮೇದಿನಿಗೆ ನಾನೇ ಹಣ ತಂದು ರಸ್ತೆ ಮಾಡಿಸುತ್ತೇನೆ. ನೀವ್ಯಾರೂ ಹೋಗಬೇಕಾಗಿಲ್ಲ. ಎಂದು ಇಒ ರಾಜೇಂದ್ರ ಭಟ್ ಹಾಗೂ ಆಡಳಿತಾಧಿಕಾರಿ ಜಯಂತ ಅವರನ್ನು ತರಾಟೆಗೆ ತೆಗೆದುಕೊಂಡರು. ಏಕೆಂದರೆ ಏನೇ ಒಳ್ಳೆಯದಾದರೂ ನನ್ನ ಹೆಸರು ಬರೋದಿಲ್ಲ. ಕೆಟ್ಟದ್ದಾದರೆ ಮಾತ್ರ ನನ್ನ ಹೆಸರು ಪ್ರಚಾರಕ್ಕೆ ಬರುತ್ತದೆ. ಅಧಿಕಾರಿಗಳಿಗೆ ನೀವು ಸರಿಯಾಗಿ ಮಾರ್ಗದರ್ಶನ ಮಾಡುತ್ತಿಲ್ಲ. ನಿಮ್ಮ ಮೇಲೆ ಹಕ್ಕುಚ್ಯುತಿ ಹಾಕಿಸಿದರೆ ಕಾರವಾರ ಬಿಟ್ಟು ಬೆಂಗಳೂರಿಗೆ ಓಡಾಡಬೇಕಾಗುತ್ತದೆ ಎಂದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶೆಟ್ಟಿ, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಎಲ್ಲೂ ಹೊಡೆದಾಟ, ಬಡಿದಾಟ, ದಾದಾಗಿರಿ, ಗೂಂಡಾಗಿರಿ ಇಲ್ಲ. ಇಂಥ ಹಲವಾರು ವಿಷಯಗಳಿಗಾಗಿಯೇ ಜನ ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ಹೊನ್ನಾವರ ತಾಪಂನಲ್ಲಿ ಎಲ್ಲ ಕೆಲಸಗಳೂ ಆಗುತ್ತವೆ. ಆದರೆ ಕುಮಟಾದಲ್ಲಿ ಆಗಲಿಲ್ಲ ಎಂಬ ಕಾರಣಕ್ಕ ತುಂಬಾ ಬೇಸರದಿಂದ ಬಂದಿದ್ದೇನೆ. ವಿಧಾನಸೌಧ, ಐಟಿಐ, ವಸತಿ ಶಾಲೆ, ಪಿಯು ಕಾಲೇಜು. ಡಿಗ್ರಿ ಕಾಲೇಜುಗಳು, ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಆಭಿವೃದ್ಧಿಯ ಕೆಲಸಗಳು ಬೇಕಾದಷ್ಟಾಗಿದೆ.

ನಿರಂತರ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಇಚ್ಛೆ. ಅದಕ್ಕೆ ವ್ಯತಿರಿಕ್ತವಾಗಿ ಕೆಲವು ನಡೆಯುತ್ತಿದೆ. ನಮ್ಮ ಪಕ್ಷ ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕೋ ಅಥವಾ ಏಕೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಸಭೆಗೆ ಬಂದಿದ್ದೇನೆ ಎಂದರು.

Share this article