ತಮಿಳುನಾಡು, ಕೇರಳ ಮಾದರಿ ಅರಣ್ಯೀಕರಣ ಸಾರ್ವತ್ರಿಕಗೊಳ್ಳಲಿ

KannadaprabhaNewsNetwork |  
Published : Jun 01, 2025, 04:20 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ: ಕೇರಳ, ತಮಿಳುನಾಡು ಇನ್ನಿತರೆ ದಕ್ಷಿಣ ಭಾರತದ ರಾಜ್ಯಗಳು ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಅಲ್ಲಿ ಯತೇಚ್ಛವಾಗಿ ಕಾಡು ಅಭಿವೃದ್ಧಿಗೊಂಡು ಹೆಚ್ಚಿನ ಮಳೆ ಆಗುವುದನ್ನು ಕಾಣಬಹುದು. ಈ ಮಾದರಿ ಸಾರ್ವತ್ರಿಕಗೊಳ್ಳುವುದು ಅಗತ್ಯವೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ: ಕೇರಳ, ತಮಿಳುನಾಡು ಇನ್ನಿತರೆ ದಕ್ಷಿಣ ಭಾರತದ ರಾಜ್ಯಗಳು ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಅಲ್ಲಿ ಯತೇಚ್ಛವಾಗಿ ಕಾಡು ಅಭಿವೃದ್ಧಿಗೊಂಡು ಹೆಚ್ಚಿನ ಮಳೆ ಆಗುವುದನ್ನು ಕಾಣಬಹುದು. ಈ ಮಾದರಿ ಸಾರ್ವತ್ರಿಕಗೊಳ್ಳುವುದು ಅಗತ್ಯವೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ಮುರುಘಾಮಠದಿಂದ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹಕ್ಕೆ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮನೆಗೊಂದು ಸಸಿ ನೆಟ್ಟು ಪರಿಸರವನ್ನು ಕಾಪಾಡಿ ಮಳೆ ಹೆಚ್ಚಾಗುವಂತೆ ಮಾಡಬೇಕು. ಪ್ರತಿ ಮನೆ, ಗ್ರಾಮ, ನಗರಗಳಲ್ಲಿ ಗಿಡ ಮರ ನೆಟ್ಟು ಪೋಷಿಸಿ ಬರದ ನಾಡನ್ನು ಮಲೆನಾಡನ್ನಾಗಿ ಮಾಡಬೇಕು ಎಂದು ಕರೆ ನೀಡಿದರು. ವರ್ಷದಿಂದ ವರ್ಷಕ್ಕೆ ಪರಿಸರ ನಾಶವಾಗುತ್ತಿರುವುದನ್ನು ತಡೆಯುವುದು ಹಾಗೂ ಭವಿಷ್ಯದ ಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಸಸಿ ನೆಡುವ ಕಾರ್ಯಕ್ರಮ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಉದ್ದೇಶದಿಂದ ಹಮ್ಮಿಕೊಳ್ಳಲಾದ ಸತ್ಕಾರ್ಯವಾಗಿದೆ. ಅರಣ್ಯ ಸಂಪತ್ತು ಇರದಿದ್ದರೆ ಯಾವುದೇ ಪ್ರಾಣಿಗೂ ಕುಡಿಯಲು ನೀರು ದೊರೆಯದು. ಕಳೆದ ಸಾಲಿನಲ್ಲಿ ಮುರುಘಾಮಠದ ಆಶ್ರಯದಲ್ಲಿ ನೆಟ್ಟ ಗಿಡಗಳು ಶೇ.85ರಷ್ಟು ಉಳಿದಿವೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು ಎಂದರು.ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ, ವಿಜ್ಞಾನದ ಪ್ರಗತಿ, ಕೈಗಾರಿಕೋದ್ಯಮಗಳ ಹೆಚ್ಚಳದಿಂದ ಪರಿಸರದ ಮೇಲೆ ದಾಳಿಯಾಗುತ್ತಿದೆ. ಇದರಿಂದ ಮನುಷ್ಯನ ನಿತ್ಯಜೀವನಕ್ಕೆ ಶುದ್ಧ ಗಾಳಿ ಸಿಗದಂತಾಗಿದೆ. ಪ್ರಕೃತಿಯು ಜತನದಿಂದ ಕಾಯ್ದುಕೊಂಡು ಬಂದಿರುವ ಸಮತೋಲನ ಇದರಿಂದ ಏರುಪೇರಾಗುತ್ತಿದೆ. ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರವಿದೆ. ಪರಿಸರವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಶ್ರೀಮಠವು ನಾಡಿನಲ್ಲಿ ಸಾಮಾಜಿಕ ಶೈಕ್ಷಣಿಕ ಪ್ರಗತಿಗಾಗಿ ಶ್ರಮ ಪಡುತ್ತಿದೆ. ಅದರಂತೆ ಪರಿಸರ ದಿನವನ್ನು ಆಚರಿಸುತ್ತಾ ಬರಲಾಗಿದೆ. ಈ ವರ್ಷ ಹಮ್ಮಿಕೊಂಡಿರುವ ಏಳು ದಿನಗಳ ಸಪ್ತಾಹದಲ್ಲಿ ಸುಮಾರು 5000 ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶೀಬಾರದಲ್ಲಿ 20 ಎಕರೆ ಅಡಕೆ ಮತ್ತು ತೆಂಗಿನ ತೋಟ ಮಾಡಲು ಉದ್ದೇಶಿಸಲಾಗಿದೆ. ಸಸಿ ನೆಡುವ ಕಾರ್ಯಕ್ರಮವು ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ನಾವು ಅನೇಕ ಪುಣ್ಯದ ಕೆಲಸ ಮಾಡುತ್ತೇವೆ. ಅದರಲ್ಲಿ ಸ್ವಾರ್ಥತೆ ಇರುತ್ತದೆ. ಆದರೆ ಸಸಿ ನೆಡುವ ಕಾರ್ಯ ನಿಸ್ವಾರ್ಥವಾದುದು. ಇದು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದ್ದು ಎಲ್ಲರೂ ತೊಡಗಿಸಿಕೊಳ್ಳಬೇಕೆಂದರು.ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಶಿವಸಿಂಪಿ ಸಮಾಜದ ಎಸ್.ವಿ ಕೊಟ್ರೇಶ್, ಅನಿತಾ ಮುರುಘೇಶ್, ಶರಣಯ್ಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ವೀರಶೈವ ಲಿಂಗಾಯತ ಸಮಾಜ ತಾಲೂಕು ಘಟಕದ ಎಂ.ವಿ.ಚನ್ನಯ್ಯ, ಷಡಕ್ಷರಯ್ಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಪ್ರಶಾಂತ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್ ರಾಜೇಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.ಬಸವರಾಜ ಕಟ್ಟಿ ಪ್ರಾರ್ಥಿಸಿದರು. ನವೀನ್ ಮಸ್ಕಲ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ