ದೇವಾಲಯಗಳು ಪರಿವರ್ತನೆಯ ಕೇಂದ್ರಗಳಾಗಲಿ

KannadaprabhaNewsNetwork | Published : Feb 17, 2024 1:16 AM

ಸಾರಾಂಶ

ಧರ್ಮ ಉಳಿಸಿ, ಮಾನವತೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ. ಮಾನವನಲ್ಲಿ ಅದ್ಭುತ ಶಕ್ತಿ ಅಡಗಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಮೊದಲು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕಿದೆ

ಹಾನಗಲ್: ದೇವಾಲಯಗಳು ಪರಿವರ್ತನೆಯ ಕೇಂದ್ರಗಳಾಗಬೇಕು. ದೇಹ ದೇವಾಲಯವಾಗಲು ಜ್ಞಾನ ದೇಗುಲದ ಸಂಖ್ಯೆ ಹೆಚ್ಚಬೇಕು ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಶಿವಲಿಂಗೇಶ್ವರ ಮತ್ತು ವೀರಭದ್ರೇಶ್ವರ ಪ್ರತಿಷ್ಠಾಪನೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇವಾಲಯಗಳು ಮೌಢ್ಯ ತುಂಬದೇ, ಮೌಲ್ಯ ತುಂಬಬೇಕು. ಮೂಢನಂಬಿಕೆ, ಕಂದಾಚಾರಗಳಿಂದ ದೂರವಾಗಬೇಕು. ನಮ್ಮ ಪೀಳಿಗೆಯ ಯುವಕರು ಜ್ಞಾನವಂತರೊಂದಿಗೆ ವಿಜ್ಞಾನವಂತರಾಗುತ್ತಿದ್ದಾರೆ.ನಮ್ಮ ದೇವಾಲಯಗಳು ವೈಜ್ಞಾನಿಕ, ಧಾರ್ಮಿಕ ವಿಧಿವಿಧಾನ ಅಳವಡಿಸಿಕೊಂಡು ಸಂಸ್ಕೃತಿ ಎತ್ತಿ ಹಿಡಿಯುವ ಕೇಂದ್ರಗಳಾಗಬೇಕು. ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ಮಧ್ಯೆಯೂ ಸ್ನೇಹ,ಪ್ರೀತಿ, ವಾತ್ಸಲ್ಯ, ಪ್ರೇಮ, ಅಂತಃಕರಣ ಮನೆ ಮಾಡಿದರೆ ಜೀವನ ಪಾವನವಾಗಲಿದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಧರ್ಮ ಉಳಿಸಿ, ಮಾನವತೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ. ಮಾನವನಲ್ಲಿ ಅದ್ಭುತ ಶಕ್ತಿ ಅಡಗಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಮೊದಲು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕಿದೆ.ಅಂದಾಗ ಮಾತ್ರ ಸ್ವಾಸ್ಥ್ಯಪೂರ್ಣ ಸುಸಂಸ್ಕೃತ ಸಮಾಜ ನೆಲೆಯೂರಲಿದೆ ಎಂದು ಅಭಿಪ್ರಾಯಪಟ್ಟ ಅವರು, ಇಂದಿನ ಯುವ ಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಯ ಮೋಡಿಗೆ ಒಳಗಾಗಿ ದಾರಿ ತಪ್ಪಿ ಹೆಜ್ಜೆ ಹಾಕುತ್ತಿರುವ ಪರಿಣಾಮ ಮಾನಸಿಕ ನೆಮ್ಮದಿ ಕಳೆದುಕೊಂಡಿದೆ. ಯುವಕರು ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಬಾಳು ಹಸನಾಗುವ ಜತೆಗೆ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಸದ್ಭಕ್ತ ಮಂಡಳಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.ಗದಗ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿಶಾಸ್ತ್ರಿ, ಹಿರೇಮಠ ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಪ್ರವಚನ ಹೇಳಿದರು. ಸುರೇಶಕುಮಾರ ನೀಲಸಾಗರ ಸಂಗೀತ ನೀಡಿದರು. ಶಿವಯ್ಯ ಇಟಗಿಮಠ ತಬಲಾ ಸಾಥ್ ನೀಡಿದರು.

Share this article