ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಇತರರಿಗೆ ಮಾದರಿಯಾಗಲಿ: ಹೊಸಮನಿ

KannadaprabhaNewsNetwork | Published : Nov 13, 2024 12:11 AM

ಸಾರಾಂಶ

Let the achievement of rural students be a model for others: Hosmani

-ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ। ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

------

ಕನ್ನಡಪ್ರಭ ವಾರ್ತೆ ಯಾದಗಿರಿ

ಗಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಇತರರಿಗೆ ಮಾದರಿಯಾಗಲಿ ಎಂದು ಡಯಟ್‌ ಹಿರಿಯ ಉಪನ್ಯಾಸಕ ಡಿ.ಎಂ. ಹೊಸಮನಿ ಹೇಳಿದರು.

ತಾಲೂಕಿನ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲಾ 9ನೇ ತರಗತಿಯ ಆಯನ್‌ ಅಲಿ ಮತ್ತು ಮಲ್ಲಪ್ಪ ವಿದ್ಯಾರ್ಥಿಗಳು ಯಾದಗಿರಿ ಡಯಟ್‌ ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಸಂಯೋಜಿತ ನೀರು ಅಥವಾ ಕೀಟನಾಶಕ ಸಿಂಪಡಿಸುವ ವ್ಯವಸ್ಥೆಯೊಂದಿಗೆ ಸೌರಶಕ್ತಿ ಚಾಲಿತ ಹುಲ್ಲು ಕತ್ತರಿಸುವ ರೋಬೋ ಯಂತ್ರ ತಯಾರಿಸಿ ವಿಷಯ ಮಂಡನೆ ಮಾಡಿರುವುದು ಉತ್ತಮವಾಗಿದೆ ಎಂದರು.

ಆಧುನಿಕ ಕಾಲದಲ್ಲಿ ರೋಬೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೃಷಿ ಕೆಲಸವನ್ನು ತ್ವರಿತವಾಗಿ ಮಾಡಲು ಸಾಕಷ್ಟು ಯಂತ್ರೋಪಕರಣಗಳು ಬೇಕಾಗುತ್ತವೆ. ನೀರು ಅಥವಾ ಕೀಟನಾಶಕ ಸಿಂಪಡಣೆಯೊಂದಿಗೆ ಸೋಲಾರ್ ಗ್ರಾಸ್ ಕಟ್ಟರ್ ನಿರ್ವಹಣೆಗೆ ನವೀನ ಪರಿಸರಸ್ನೇಹಿ ಪರಿಹಾರವಾಗಿದೆ. ಈ ವಿವಿಧ ವಿಷಯ ಮಂಡನೆ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಉತ್ತಮ ಹೆಸರು ತರುವಂತಾಲಿ ಎಂದು ಹಾರೈಸಿದರು.

ಮುಖ್ಯಗುರು ಲಿಂಗಾರೆಡ್ಡಿ ನಾಯಕ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ನಮ್ಮ ಶಾಲೆಯ ಮಹತ್ವ ಹೆಚ್ಚಾಗುವಂತೆ ಮಾಡಿದೆ. ಇಗಾಗಲೇ ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ ಅವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಗಡಿ ಗ್ರಾಮೀಣ ಭಾಗದ ಈ ವಿವಿಧ ಪ್ರಯತ್ನ ನಮ್ಮ ಜವಬ್ದಾರಿ ಹೆಚ್ಚಾಗುವಂತೆ ಮಾಡಿದೆ ಎಂದರು.

ಡಯಟ್‌ ನೋಡಲ್ ಅಧಿಕಾರಿ ಹಿರಿಯ ಉಪನ್ಯಾಸಕ ಶೇಖರಪ್ಪ, ನಿರ್ಣಾಯಕರಾಗಿ ಗಿರಿಯಪ್ಪಗೌಡ ಮೇಟಿ, ದ್ರುವರಾಜ ಶಾಸ್ತ್ರಿ, ಹಣಮಯ್ಯ ಕಲಾಲ, ಯಾಸ್ಮಿನ್ ಬೇಗಂ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.

-----

ಫೋಟೊ: ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾವರ್ಧಕ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಪ್ರಮಾಣ ಪತ್ರ ವಿತರಿಸಲಾಯಿತು.

12ವೈಡಿಆರ್6

Share this article