ಒಕ್ಕಲಿಗರ ಸಂಘ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿ

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ಚನ್ನಪಟ್ಟಣ: ಒಕ್ಕಲಿಗ ಸಮುದಾಯದ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಪಡೆದು, ಸಾಕಷ್ಟು ಪ್ರತಿಷ್ಠಿತ ಹುದ್ದೆಗಳನ್ನು ಗಳಿಸುತ್ತಿದ್ದಾರೆ. ಸಮುದಾಯದ ಕೆಲವರು ಉನ್ನತ ಸಾಧನೆ ಮಾಡುತ್ತಿದ್ದರೂ, ಇನ್ನು ಹಳ್ಳಿಗಾಡಿನ ರೈತರ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಒಕ್ಕಲಿಗ ಸಮುದಾಯದ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಪಡೆದು, ಸಾಕಷ್ಟು ಪ್ರತಿಷ್ಠಿತ ಹುದ್ದೆಗಳನ್ನು ಗಳಿಸುತ್ತಿದ್ದಾರೆ. ಸಮುದಾಯದ ಕೆಲವರು ಉನ್ನತ ಸಾಧನೆ ಮಾಡುತ್ತಿದ್ದರೂ, ಇನ್ನು ಹಳ್ಳಿಗಾಡಿನ ರೈತರ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರ ಕೆಂಪೇಗೌಡ ಬಡಾವಣೆಯಲ್ಲಿ ಒಕ್ಕಲಿಗರ ಸಂಘ ನಿರ್ಮಿಸಿರುವ ನೂತನ ಉಚಿತ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಎಲ್ಲೆಡೆ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಸಮುದಾಯದ ರಾಜಕಾರಣಿಗಳು ಹಾಗೂ ಒಕ್ಕಲಿಗರ ಸಂಘ ಮಾಡಬೇಕು ಎಂದು ಸಲಹೆ ಮಾಡಿದರು.

ಇಂದು ರೈತರು ಬೆಳೆಯುವ ಬೆಳೆಗಳಿಗಿಂತ ಬೇರೆಯದಕ್ಕೆ ಬೆಲೆ ಇದೆ. ಹಾಲಿಗಿಂತ ಮದ್ಯಕ್ಕೆ ಬೆಲೆ ಹಾಗೂ ಬೇಡಿಕೆ ಜಾಸ್ತಿ ಇದೆ. ನಮ್ಮ ಸಮುದಾಯದ ರಾಜಕಾರಣಿಗಳು ಇವುಗಳನ್ನು ಪರಿಹರಿಸುವುದು ಬಿಟ್ಟು, ಪರಸ್ಪರ ಜಗಳಗಳಲ್ಲಿ ತೊಡುಗುವುದು ಸರಿಯಲ್ಲ. ರೈತರ ಹಿತ ಕಾಯಲು ಸಮುದಾಯವನ್ನು ಅಭಿವೃದ್ಧಿಗೊಳಿಸಲು ನಾವೆಲ್ಲ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಹಿಂದೆ ಹೆಣ್ಣುಮಕ್ಕಳನ್ನು ಎಸ್ಸೆಸ್ಸೆಲ್ಸಿವರೆಗೆ ಓದಿಸಿದರೆ ಹೆಚ್ಚು ಎಂಬ ಮಾತಿತ್ತು. ಆದರೆ, ಇಂದು ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯಗಳು ಹಿಂದೆಂಗಿಂತ ಇಂದು ಅಗತ್ಯತೆ ಹೆಚ್ಚಿದೆ. ಒಕ್ಕಲಿಗರ ಸಂಘದಲ್ಲಿ ಸಾಕಷ್ಟು ಸಂಪನ್ಮೂಲವಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಉತ್ತಮ ಕೆಲಸಗಳನ್ನು ಮಾಡಿದೆ. ಅದರಲ್ಲೂ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ನೆರವಾಗಿದೆ. ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದಿತ್ತಾದರೂ, ಅದು ಆಗಿಲ್ಲ ಎಂಬ ಕೊರಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಾಡಿನ ಅಭಿವೃದ್ಧಿಗೆ ಒಕ್ಕಲಿಗರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಸಮುದಾಯದ ರಾಜರು ಸಾಕಷ್ಟು, ಕೆರೆಗಳು, ದೇವಾಲಯಗಳನ್ನು ಕಟ್ಟಿಸಿ ರಾಜ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಒಕ್ಕಲಿಗ ಸಮುದಾಯದ ಇತಿಹಾಸ ಸಾಕಷ್ಟು ಆಳವಾಗಿ ಬೇರೂರಿದೆ. ಇಲ್ಲಿ ಮಾತ್ರವಲ್ಲದೇ ಆಂಧ್ರ, ತಮಿಳುನಾಡು, ಒಡಿಸ್ಸಾ ರಾಜ್ಯಗಳಲ್ಲೂ ನಮ್ಮ ಸಮುದಾಯದ ಬೇರುಗಳು ಚಾಚಿಕೊಂಡಿವೆ. ಒಕ್ಕಲಿಗರ ಸಂಘ ಬರೀ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿದರೆ ಸಾಕಷ್ಟು, ಸಮುದಾಯದ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಸರ್ಕಾರದ ಅನುದಾನ ಹಾಗೂ ದಾನಿಗಳ ಸಹಕಾರದಿಂದ ರಾಜ್ಯದ ಅನೇಕ ಕಡೆಗಳಲ್ಲಿ ವಸತಿ ನಿಲಯಗಳನ್ನು ನಿರ್ಮಿಸುವ ಗುರಿಯನ್ನು ಸಂಘ ಹೊಂದಿದೆ. ಬೆಂಗಳೂರಿನ ನಾಲ್ಕು ಭಾಗದಲ್ಲಿ ಹಾಗೂ ಚನ್ನಪಟ್ಟಣದಲ್ಲೂ ಜಾಗ ಖರೀದಿಸಿ ಶಿಕ್ಷಣ ಸಂಸ್ಥೆ ನಿರ್ಮಿಸುವ ಗುರಿಯನ್ನು ಹೊಂದಿದ್ದು, ಸಮುದಾಯದ ಸವಾಂಗೀಣ ಅಭಿವೃದ್ಧಿಗೆ ಸಂಘ ಬದ್ಧವಾಗಿದೆ ಎಂದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಜಯಮುತ್ತು, ಉಪಾಧ್ಯಕ್ಷ ಹಾಪ್‌ಕಾಮ್ಸ್ ದೇವರಾಜು ಹಾಗೂ ನಿರ್ದೇಶಕರಾದ ಪುಟ್ಟಸ್ವಾಮಿ, ವೆಂಕಟರಾಮೇಗೌಡ, ಹನುಮಂತರಾಯಪ್ಪ, ಡಾ.ಅಂಜನಪ್ಪ, ಲೆಕ್ಕ ಪರಿಶೋಧಕ ರಾಘವೇಂದ್ರ, ಟಿ.ಕೆ.ಯೋಗೀಶ್ ಇತರರು ಉಪಸ್ಥಿತರಿದ್ದರು. ಪೊಟೋ೧೬ಸಿಪಿಟಿ೨:

ಒಕ್ಕಲಿಗ ಸಂಘದ ವಸತಿ ನಿಲಯ ಉದ್ಘಾಟನೆ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Share this article