ಬಾಲಕಾರ್ಮಿಕ ಯೋಜನೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ತಹಸೀಲ್ದಾರ
ಕನ್ನಡಪ್ರಭ ವಾರ್ತೆ ಯಲಬುರ್ಗಾತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಬಾಲ ಕಾರ್ಮಿಕರನ್ನು ರಕ್ಷಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಬಾಲಕಾರ್ಮಿಕ ಯೋಜನೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಬಾಲಕಾರ್ಮಿಕ, ಕಿಶೋರ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ತಂಡದ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಂಡು ಬಂದ ಬಾಲಕಾರ್ಮಿಕ/ಕಿಶೋರ ಕಾರ್ಮಿಕ ಮಕ್ಕಳ ದಾಖಲೆ ಪಡೆದುಕೊಂಡು ಪರಿಶೀಲಿಸಿ, ಸಮೀಪದ ಶಾಲೆಗಳಿಗೆ ದಾಖಲಿಸುವುದರ ಮೂಲಕ ಮುಖ್ಯ ವಾಹಿನಿಗೆ ತರಬೇಕು. ಪುನರ್ವಸತಿ ಅವಶ್ಯಕತೆ ಇರುವ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮೂಲಕ ಪುನರ್ವಸತಿ ಕಲ್ಪಿಸಬೇಕು. ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಯಲಬುರ್ಗಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಪುತ್ರಮ್ಮ ಅಂಗಡಿ ಮಾತನಾಡಿ, ಬಾಲಕಾರ್ಮಿಕರನ್ನು ಗುರುತಿಸುವ ಕೆಲಸ ಎಲ್ಲ ಅಧಿಕಾರಿಗಳ ಜವಾಬ್ದಾರಿಯಾಗಿದೆ. ೧೪ ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ವೃತ್ತಿಯಲ್ಲಿ ಕೆಲಸ ನಿರ್ವಹಿಸುವುದು ಮತ್ತು ೧೪ರಿಂದ ೧೮ ವರ್ಷದೊಳಗಿನ ಮಕ್ಕಳು ಅಪಾಯಕಾರಿ ವೃತ್ತಿಯಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ನಿರಂತರ ಬಾಲಕಾರ್ಮಿಕರ ತಪಾಸಣೆ ನಡೆಸಿ ತಾಲೂಕು ಆಡಳಿತಕ್ಕೆ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಕೊಪ್ಪಳದ ಕಾರ್ಮಿಕ ಇಲಾಖೆ ಸಿಬ್ಬಂದಿ, ಮಕ್ಕಳ ಸಹಾಯವಾಣಿ-೧೦೯೮ ಸಿಬ್ಬಂದಿ, ಪೊಲೀಸ್ ಠಾಣೆ ಸಿಬ್ಬಂದಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಪರಿಶೀಲನೆ:ಸಭೆಯ ನಂತರ ಯಲಬುರ್ಗಾ ಪಟ್ಟಣದ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡವು ಕಿರಾಣಿ ಹಾಗೂ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರನ್ನು ಅಂಗಡಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬಾರದು ಎನ್ನುವ ಪೋಸ್ಟರ್ ನೀಡಿ ಜಾಗೃತಿ ಮೂಡಿಸಿತು.
ತಾಲೂಕು ಮಟ್ಟದ ಎಲ್ಲ ಅನುಷ್ಠಾನ ಅಧಿಕಾರಿಗಳ ಸೇರಿದಂತೆ ಕಂದಾಯ ಸಿಬ್ಬಂದಿ ವರ್ಗದವರು ಸಭೆಯಲ್ಲಿದ್ದರು.