ಮುಂಡರಗಿ: ದೇಶ ರಕ್ಷಣೆಗಾಗಿ ಯೋಧ, ಜನರ ರಕ್ಷಣೆಗಾಗಿ ರೈತ ಇವರೀರ್ವರೂ ಅತ್ಯಂತ ಮಹತ್ವ ವ್ಯಕ್ತಿಗಳಾಗಿದ್ದು, ತಾವು ಕೂಡಾ ಲೋಕ ಕಲ್ಯಾಣಕ್ಕಾಗಿ ಜೈ ಜವಾನ, ಜೈ ಕಿಸಾನ್ ಮಹಾ ಸಂಕಲ್ಪ ಮಾಡಿದ್ದು, ಮುಂಡರಗಿಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಶೀಘ್ರದಲ್ಲಿಯೇ ಖ್ಯಾತಿಗೊಳ್ಳಲಿ. ಅದಕ್ಕೆ ಸದಾ ಎಲ್ಲರ ಸಹಕಾರ ಇರಲಿ ಎಂದು ಮಹರ್ಷಿ ಡಾ. ಆನಂದ ಗುರೂಜಿ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜರುಗಿದ ಲಕ್ಷ ದೀಪೋತ್ಸವ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ, ಸಂಸ್ಕಾರ ಬಹಳ ಮಹತ್ವದ್ದಾಗಿದ್ದು, ಮಾನವೀಯತೆ, ಧರ್ಮ, ಮಮತೆ ಆಚರಣೆ ಇನ್ನು ನಿರಂತರ ಉಳಿದಿದೆ ಎಂದರೆ ಅದು ಮಹಿಳೆಯರಿಂದ ಮಾತ್ರ. ಇಂತಹ ಪರಂಪರೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ.
ತಂದೆ ತಾಯಿಗಳ ಸನ್ಮಾರ್ಗದಲ್ಲಿ ಧರ್ಮದ ತೇರು ಎಳೆಯಲು ಎಲ್ಲರೂ ಕೈ ಜೋಡಿಸಬೇಕು. ಮನುಷ್ಯ ಜೀವನ ಕ್ಷಣಿಕ. ನಾನು ಎಂಬ ಅಹಂಭಾವ ಬೆಳೆಸಿಕೊಳ್ಳದೇ ಭಗವಂತ ಕೊಟ್ಟ ಎಲ್ಲ ಅಷ್ಟ ಐಶ್ವರ್ಯಗಳನ್ನು ಇಲ್ಲಿಯೇ ಬಿಟ್ಟು ಹೋಗುವಾಗ ಯಾಕಿಷ್ಟು ಭೇದ ಮತ್ಸರ ತಾಳಬೇಕು. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವಾಗಿರುವ ಹೆಣ್ಣು ಮಕ್ಕಳ ಬಗ್ಗೆ ಎಲ್ಲರಿಗೂ ಗೌರವ ಇರಬೇಕು. ದುಡಿಯದೇ ಬಂದಿರುವುದನ್ನು ಬಯಸುವುದಕ್ಕಿಂತ, ಮನಸ್ಸು ದಂಡಿಸಿ ಕೆಲಸ ಮಾಡಿದಾಗ ಸಿಗುವ ತೃಪ್ತಿಯೇ ಬೇರೆ. ದೀಪ ಬೆಳಗಿಸುವ ಉದ್ದೇಶ ಕತ್ತಲಿನಲ್ಲಿರುವವರನ್ನು ಬೆಳಕಿನಡೆಗೆ ಕರೆದುಕೊಂಡು ಹೋಗುವದು.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ. 22 ಅವಿಸ್ಮರಣೀಯ ದಿನವಾಗಿದ್ದು, ಎಲ್ಲರೂ ಇಲ್ಲಿಂದಲೇ ಅದಕ್ಕೆ ಸಾಕ್ಷಿಯಾಗೋಣ ಎಂದರು. ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಭಾರತೀಯರಲ್ಲಿ ಧರ್ಮ, ಸಂಸ್ಕೃತಿ ಉಳಿಸಿದ ಪ್ರತೀಕವಾಗಿ ನಿರಂತರ ಧಾರ್ಮಿಕ ಭಾವನೆಗಳನ್ನು ಹೊಂದಿ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಹೋಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಜ. 22ರಂದು ಶ್ರೀ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆ ಯಾಗುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ. ಅಯ್ಯಪ್ಪಸ್ವಾಮಿಗಳು ಮಾಲಾಧಾರಿಗಳಾಗಿ ವ್ರತ ಪಾಲನೆ ಮಾಡುತ್ತಾರೆ. ಅದರ ಸಂಕೇತ ಎಲ್ಲರೂ ಸಾಹಸಮಯಿಗಳಾಗಿರಿ, ಧರ್ಮದಿಂದ ನಡೆದು ಧರ್ಮ ಉಳಿಸುವ ಕಾರ್ಯವಾಲಿ ಎನ್ನುವದಾಗಿದೆ. ಡಾ. ಆನಂದ ಗುರೂಜಿ ಅವರು ಕೂಡಾ ಧರ್ಮ ಸಂಸ್ಕೃತಿ ಕುರಿತು ಹೇಳಿದ್ದಾರೆ ಎಂದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜತೆಗೆ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಹಂಚಿನಾಳ, ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ, ಅಂದಪ್ಪ ಗೋಡಿ, ಡಾ. ವೀರೇಶ ಹಂಚಿನಾಳ, ಸಿದ್ದಲಿಂಗಪ್ಪ ಉಮಚಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜುನಾಥ ಗುರುಸ್ವಾಮಿ, ಬಾಬಣ್ಣ ಕಲಾಲ, ಗೋಪಾಲಪ್ಪ ಕಲಾಲ, ಹೇಮಗಿರೀಶ ಹಾವಿನಾಳ, ನಾಗೇಶ ಹುಬ್ಬಳ್ಳಿ, ಪ್ರಶಾಂತಸ್ವಾಮಿ ಅಳವಂಡಿ, ವೀರೇಶಸ್ವಾಮಿ ಬಡಿಗೇರ, ಪ್ರಕಾಶಸ್ವಾಮಿ, ಹನುಮಂತಸ್ವಾಮಿ ಭಜಂತ್ರಿ, ಗಿರೀಶಗೌಡ ಪಾಟೀಲ, ಅನಂತು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿ.ಜಿ.ಲಿಂಬಿಕಾಯಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುತ್ತು ನಾಗರಹಳ್ಳಿ, ಮಂಜುನಾಥ ಹೊಸಮನಿ ನಿರೂಪಿಸಿ, ವಂದಿಸಿದರು.