ಬಸವ ಧರ್ಮ ಸಂಸತ್ತು ಕಾರ್ಯಕ್ರಮ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಎರಡು ದಿನಗಳ ಕಾಲ ಕೂಡಲಸಂಗಮದಲ್ಲಿ ಆಯೋಜಿಸಲು ನಿರ್ಧರಿಸಿರುವ ಬಸವ ಧರ್ಮ ಸಂಸತ್ತು ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎರಡು ದಿನಗಳ ಕಾಲ ಕೂಡಲಸಂಗಮದಲ್ಲಿ ಆಯೋಜಿಸಲು ನಿರ್ಧರಿಸಿರುವ ಬಸವ ಧರ್ಮ ಸಂಸತ್ತು ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕೂಡಲಸಂಗಮದಲ್ಲಿ ಸರ್ವಧರ್ಮ ಸಂಸತ್ತು ಕಾರ್ಯಕ್ರಮದ ಆಯೋಜನೆಗೆ ಸೂಕ್ತ ಸಮಿತಿ ರಚಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಬದುಕು, ಸಂದೇಶ, ಚಿಂತನೆಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಯಾವುದೇ ಲೋಪದೋಷಗಳಾಗದಂತೆ ಕಾರ್ಯಗಳಾಗಬೇಕು ಎಂದು ತಿಳಿಸಿದರು.

ಸ್ವಾಗತ ಹಾಗೂ ಶಿಷ್ಟಾಚಾರ ಸಮಿತಿ, ಹಣಕಾಸು, ಸಾರಿಗೆ, ವಸತಿ, ಆಹಾರ, ಪ್ರಚಾರ ಮತ್ತು ಜಾಹೀರಾತು ಮಾಧ್ಯಮ ಸಮಿತಿ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಹಾಗೂ ಅಗ್ನಿಶಾಮಕ ದಳ ವ್ಯವಸ್ಥೆ ಸಮಿತಿ, ಮೆರವಣಿಗೆ ಹಾಗೂ ವೇದಿಕೆ ಸಮಿತಿ ಸೇರಿ ಒಟ್ಟು 11 ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ವಿಶೇಷವಾಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಕಾರ್ಯಕ್ರಮ ಜರಗುವ ಸ್ಥಳದಲ್ಲಿ ಅಲ್ಲಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಕಾರ್ಯಕ್ರಮದ ಅಂದಾಜು ಖರ್ಚು ವೆಚ್ಚ, ಅತಿಥಿಗಳ ವಸತಿ, ಕೂಡಲಸಂಗಮ ಸಂಪರ್ಕಿಸುವ ರಸ್ತೆಗಳ ಸ್ಥಿತಿಗತಿ, ಕಾರ್ಯಕ್ರಮದ ಕುರಿತು ಪ್ರಚಾರ ವೈಖರಿ ಮತ್ತು ಭದ್ರತೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಿದ್ದು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ, ಅಪರ ಪೊಲೀಸ್ ಅಧೀಕ್ಷಕ ಪ್ರಸನ್ನ ಬಸವಂತರಾಯ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article