ಕೇಂದ್ರ ಸರ್ಕಾರ ಅಂಗವಿಕಲರಿಗೆ ₹೧೦ಸಾವಿರ ಮಾಸಾಶನ ನೀಡಲಿ

KannadaprabhaNewsNetwork | Published : Aug 5, 2024 12:30 AM

ಸಾರಾಂಶ

ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಗೆ ಹಣ ಹೆಚ್ಚಳ ಮಾಡಿಲ್ಲ.

ಹಗರಿಬೊಮ್ಮನಹಳ್ಳಿ; ಅಂಗವಿಕಲರನ್ನು ಕಡೆಗಣಿಸಿದ ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಸಮಿತಿಯವರು ಪ್ರತಿಭಟನೆ ನಡೆಸಿದರು.

ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, ಕೇಂದ್ರ ಸರ್ಕಾರ ಅಂಗವಿಕಲರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿರುವುದು ಬಲವಾಗಿ ಕಂಡುಬರುತ್ತಿದೆ. ಸರ್ಕಾರದ ಆದ್ಯತೆಗಳು ದಮನಿತರ ಪರವಾಗಿಲ್ಲದಿರುವುದು ಈ ಬಜೆಟ್‌ನಿಂದ ಗೊತ್ತಾಗುತ್ತಿದೆ. ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಗೆ ಈ ಬಜೆಟ್‌ನಿಂದ ಯಾವುದೇ ಅನುದಾನ ದೊರೆತಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಶೇ.೦.೦೨೫ರಷ್ಟು ಮಾತ್ರವೇ ಹಣ ದಕ್ಕಿದ್ದು ಬಿಟ್ಟರೇ ಬೇರೆ ಯಾವುದು ಇಲ್ಲ. ದೇಶದ ಅಂಗವಿಕಲರ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರು, ಎಲ್ಲ ಸಚಿವಾಲಯಗಳಿಗೆ ಶೇ.೫ರಷ್ಟು ಹಣಕ್ಕಾಗಿ ಒತ್ತಾಯಿಸುತ್ತಿವೆ. ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಗೆ ಹಣ ಹೆಚ್ಚಳ ಮಾಡಿಲ್ಲ. ಪಿಂಚಣಿಯಲ್ಲಿ ೨೦೧೧ರಿಂದ ಕೇಂದ್ರ ಪಾಲು ೩೦೦ರೂಗಳು ಮಾತ್ರ ಆಗಿದೆ. ಇಡೀ ದೇಶದ ಅಂಗವಿಕಲರಿಗೆ ಒಂದೇ ರೀತಿಯ ಪೆನ್ಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕು. ಪಕ್ಕದ ಆಂದ್ರದಲ್ಲಿ ₹೬ಸಾವಿರ ಮಾಸಾಶನ ಕೊಡುತ್ತಿದ್ದಾರೆ. ಕರ್ನಾಟಕದ ಅಂಗವಿಕಲರು ಕೂಡ ಒಂದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಂಗವಿಕಲರಿಗೆ ಕನಿಷ್ಠ ₹೧೦ಸಾವಿರ ಮಾಸಾಶನ ನೀಡಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷೆ ಬಿ.ರೇಣುಕಾ ಮಾತನಾಡಿ, ಕೇಂದ್ರ ಸರ್ಕಾರ ತನ್ನ ತೆರಿಗೆ ಆದಾಯ ಗಳಿಕೆಯಲ್ಲಿ ಹೆಚ್ಚು ಮಾಡಿಕೊಂಡಿದೆ. ಇದಕ್ಕನುಗುಣವಾಗಿ ಅಂಗವಿಕಲರು ಮತ್ತು ಇತರ ಅಂಚಿನಲ್ಲಿರುವವರಿಗೆ ಖರ್ಚು ಮಾಡಲು ಸಿದ್ದರಿಲ್ಲ. ಕೇಂದ್ರದ ಇಂತಹ ನೀತಿಗಳ ವಿರುದ್ಧ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ದೇಶದಾದ್ಯಂತ ಪ್ರತಿಭಟನೆಯನ್ನು ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ದಶಮಾಪುರ ಹುಲುಗಪ್ಪ, ಅಂಕಸಮುದ್ರ ನಾಗರಾಜ, ಗಂಟೆ ಪರುಸಪ್ಪ, ಸೊಬಟಿ ಅಂಜಿನಪ್ಪ, ಸಾಲ್ಮೂರಳ್ಳಿ ಗಂಗಮ್ಮ, ಉಮಾದೇವಿ, ಬೆಣಕಲ್ಲು ಅಂಜಿನಪ್ಪ, ಗುಳೇದಾಳ ಬೀಮೇಶ್, ಏಣಿಗಿ ಕೊಟ್ರೇಶ, ನಿಂಗಪ್ಪ ಇತರರಿದ್ದರು.

Share this article