ಮಕ್ಕಳಿಗೆ ಪ್ರಶ್ನಿಸುವ ಗುಣ ಕಲಿಸುವಂತಾಗಲಿ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ತಾಯಿ ಜಗದೋದ್ಧಾರಕ ಶಕ್ತಿ ಎಂಬ ಸತ್ಯ ಅರಿತು ಬಾಳಿದರೆ ಬದುಕು ಹಸನಾಗಿ ಸಮಾಜಕ್ಕೆ ಒಳಿತಾಗಿ ದೇಶಕ್ಕೆ ಹಿತವಾಗುವ ಪ್ರತಿಭಾ ಸಂಪನ್ನತೆ ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು

ಹಾನಗಲ್ಲ: ತಾಯಿ ಜಗದೋದ್ಧಾರಕ ಶಕ್ತಿ ಎಂಬ ಸತ್ಯ ಅರಿತು ಬಾಳಿದರೆ ಬದುಕು ಹಸನಾಗಿ ಸಮಾಜಕ್ಕೆ ಒಳಿತಾಗಿ ದೇಶಕ್ಕೆ ಹಿತವಾಗುವ ಪ್ರತಿಭಾ ಸಂಪನ್ನತೆ ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಅಕ್ಷಯ ಟ್ರಸ್ಟನ್‌ ಶ್ರೀಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಹಾನಗಲ್ಲಿನ ದಯಾನಂದ ವಿದ್ಯಾಭಾರತಿ ಪ್ರಾಥಮಿಕ, ಪ್ರೌಢ ಶಾಲೆಯ ಮಾತೃ ವಂದನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನನ್ನು ತಾಯಿ ಬೆಳಸಿದಳು. ನಾನು ಸನ್ಯಾಸಿಯಾಗುವುದನ್ನು ಒಪ್ಪದೆ ಸಮಾಜಕ್ಕೆ ಒಳಿತು ಮಾಡುವ, ಒಳ್ಳೆಯವನಾಗುವ ಶ್ರದ್ಧೆಯಿಂದ ಬದುಕು. ದುರ್ಬಲರ ಸೇವೆ ಮಾಡು. ಒಳ್ಳೆಯ ಸಂಸ್ಕಾರವಂತನಾಗಿ ಸಮಾಜಕ್ಕೆ ಸಂಸ್ಕಾರ ಕೊಡುವ ಹಿತ ಚಿಂತನೆ ಇರಲಿ ಎಂದು ಆಶೀರ್ವದಿಸಿದರು.

ಆದರೂ ನಾನು ತಾಯಿಯನ್ನು ಒಪ್ಪಿಸಿ ಸನ್ಯಾಸತ್ವ ಸ್ವೀಕರಿಸಿ ತಾಯಿ ಹೇಳಿದ ಚಿಂತನೆಗಳನ್ನೇ ಪಾಲಿಸುತ್ತಿದ್ದೇನೆ. ಸಮಾಜದ ಬಗೆಗೆ ಕರುಣೆ ಬೇಕು. ಶಿಕ್ಷಣ ಎಂದರೆ ಕೇವಲ ದುಡ್ಡು ಗಳಿಸುವುದಕ್ಕಲ್ಲ. ಅಂಕ ಶಿಕ್ಷಣವೇ ಶಿಕ್ಷಣ ಎಂಬ ತಪ್ಪು ತಿಳಿವಳಿಕೆ ಇದೆ. ಪ್ರತಿಭೆಯ ಅನ್ವೇಷಣೆ ಶಿಕ್ಷಣ. ನಾಳೆಗಾಗಿ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳುವ ಶಿಷ್ಟ ದಾರಿ ನಮ್ಮದಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಮಕ್ಕಳನ್ನು ನಿತ್ಯ ನಿರಂತರ ಗಮನಿಸಿ ಅವರ ದಾರಿಯ ಬಗೆಗೆ ಕಾಳಜಿ ವಹಿಸಬೇಕು. ಮೊಬೈಲ್, ಟಿವಿಯಿಂದ ಮಕ್ಕಳ ದೂರವಿಷ್ಟಟ್ಟು ಮಕ್ಕಳು ಒಳ್ಳೆಯ ದಾರಿಗೆ ಬರಬಲ್ಲರು. ತಾಯಿಯ ಪ್ರೀತಿಯ ಜತೆಗೆ ತಂದೆಯ ಶಿಸ್ತು ಸಂಯಮ ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳಿಗೆ ಪ್ರಶ್ನಿಸುವ ಗುಣ ಕಲಿಸಬೇಕು. ನಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಸಿ ಕೀಳರಿಮೆಗೆ ಗುರಿ ಮಾಡುವುದು ಬೇಡ. ತಮ್ಮ ತಮ್ಮ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಜವಾಬ್ದಾರಿ ತಾಯಿ ತಂದೆ ಹಾಗೂ ಶಿಕ್ಷಕರದ್ದು ಎಂದರು.

ಶಾಲಾ ಸುಧಾರಣಾ ಸಮಿತಿ ಸದಸ್ಯ ವಿಶ್ವನಾಥ ಭಿಕ್ಷಾವರ್ತಿಮಠ, ಪ್ರದೀಪ ಮಹೇಂದ್ರಕರ, ಕೃಷ್ಣಾ ಸವಣೂರ, ವಿನಸ್ ಬ್ಯಾಂಕನ ವಿಜಯಕುಮಾರ, ಆನಂದ ದೊಡ್ಡಕುರುಬರ, ಶ್ರೀನಿವಾಸ ದೀಕ್ಷಿತ್ ಅತಿಥಿಗಳಾಗಿದ್ದರು. ಮುಖ್ಯೋಪಾಧ್ಯಾಯ ಸಂತೋಷ ದೊಡ್ಡಮನಿ, ರಾಜು ಹೈಬತ್ತಿ ವೇದಿಕೆಯಲ್ಲಿದ್ದರು.

ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆ ಮಾಡಿದ ಮಕ್ಕಳನ್ನು ಮೇಧಾ ಬಣಕಾರ, ಶೃತಿ ಬಂಕಾಪುರ ಸನ್ಮಾನಿಸಿದರು. ವಿನಾಯಕ ಕಳಸೂರ, ಪ್ರಕಾಶ ಬಡಿಗೇರ, ಉಳವಪ್ಪ ಲಮಾಣಿ, ಮಹೇಶ್ವರಿ ಪೂಜಾರ, ಶಿಲ್ಪಾ ಮುಚ್ಚಂಡಿ, ಪ್ರಮೋದ ಬಿ, ಕಾರ್ತಿಕ್ ಪಿ, ಸಹನಾ ಓಲೇಕಾರ, ತೇಜಸ್ವಿನಿ ಜಾಧವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಜು ಹೈಬತ್ತಿ ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸಂತೋಷ ದೊಡ್ಡಮನಿ ವರದಿ ವಾಚನ ಮಾಡಿದರು. ಭಾಗ್ಯಶ್ರೀ ತುಪ್ಪದ, ನಾಜ್ಮಿನ್ ಸಿಡೇನೂರ ನಿರೂಪಿಸಿದರು. ರಾಜೇಶ ಹೊಳಲದವರ ವಂದಿಸಿದರು.

ಪಾದ ಪೂಜೆ: ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಮಕ್ಕಳಿಂದ ತಮ್ಮ ತಾಯಂದಿರ ಪಾದಪೂಜೆ ಕಾರ್ಯಕ್ರಮ ಅತ್ಯಂತ ಹೃದಯ ಸ್ಪರ್ಷಿಯಾಗಿತ್ತು. ಇಂದಿನ ಮಕ್ಕಳಿಗೆ ಆಗುತ್ತಿರುವ ಸಂಸ್ಕಾರದ ಕೊರತೆ ನೀಗಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂಬ ಭಾವನೆ ವ್ಯಕ್ತವಾಯಿತು.

Share this article