ಮಕ್ಕಳು ಉತ್ತಮ ಸಂಸ್ಕಾರ ಹೊಂದಿ ಸಮಾಜಕ್ಕೆ ಆಸ್ತಿ ಆಗಲಿ

KannadaprabhaNewsNetwork | Published : Nov 25, 2024 1:00 AM

ಸಾರಾಂಶ

ಚಿತ್ರದುರ್ಗ ಮುರುಘಾಮಠದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಬೆಂಗಳೂರು ವಿಭಾಗದ ಸಹ ನಿರ್ದೇಶಕ ಹಸನ್ ಮೊಯುದ್ಧೀನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಂದು ದೇಶದ ಆಸ್ತಿ ಅಲ್ಲಿರುವ ಭೌತಿಕ ಕಟ್ಟಡಗಳ ಅವಲಂಬಿಸಿಲ್ಲ. ಕಲೆಯಲ್ಲಿ ಸಾಧನೆ ಮಾಡುವವರು ದೇಶದ ನಿಜವಾದ ಆಸ್ತಿಯಾಗುತ್ತಾರೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು. ಎನ್‌ಸಿಇಆರ್‌ಟಿ ಶಾಲಾ ಶಿಕ್ಷಣ ಇಲಾಖೆ, ಡಿಎಸ್ಇಆರ್‌ಟಿ ಹಾಗೂ ಡಯಟ್ ವತಿಯಿಂದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ಮುರುಘಾಮಠ ಅನುಭವ ಮಂಟಪ ವೇದಿಕೆಯಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಕಲಾವಿದರನ್ನು ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಸಮಾಜದಲ್ಲಿ ನಿಜವಾದ ಸಮೃದ್ಧತೆ ಕಲಾವಿದರ ಬೆಳವಣಿಗೆಯಿಂದಾಗುತ್ತದೆ. ಪ್ರಸ್ತುತ ದಿನದಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಸಮಾಜಕ್ಕೆ ಆಸ್ತಿಯಾಗಲಿ. ಇಲ್ಲಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ವಿಭಾಗದ ಸಹನಿರ್ದೇಶಕ ಹಸನ್ ಮೊಯುದ್ದೀನ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಪಠ್ಯ ಚಟುವಟಿಕೆ ಭಾಗವಾಗಿ ಶೈಕ್ಷಣಿಕ ವಿಚಾರಗಳ ಜತೆಗೆ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಅನುಷ್ಟಾನಗೊಳಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂದು ತಿಳಿಸಿದರು. ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆಗಳು ಥೀಮ್ ಆಧಾರಿತವಾಗಿದ್ದು ಪ್ರತಿ ಸ್ಪರ್ಧೆಗೂ 5 ಥೀಮ್‍ಗಳನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಒಂದು ಥೀಮ್ ಆಯ್ಕೆ ಮಾಡಿಕೊಂಡು ಪಾತ್ರಾಭಿನಯವನ್ನು ಇಂಗ್ಲೀಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಪ್ರಸ್ತುತಪಡಿಸುವರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ ಎಂದು ತಿಳಿಸಿದರು. ಸಿಟಿಇ ಪ್ರವಾಚಕ ಹನುಮಂತರಾಯ, ಡಿವೈಪಿಸಿ ವೆಂಕಟೇಶಪ್ಪ, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಜಿಲ್ಲಾ ಎನ್‌ಪಿಇಪಿ ನೋಡಲ್ ಅಧಿಕಾರಿ ಎಸ್.ಬಸವರಾಜು, ತೀರ್ಪುಗಾರರಾದ ರುದ್ರಮುನಿ, ಮಧು, ಕುಮಾರಪ್ಪ, ಡಾ.ನಂದಿನಿ ಶಿವಪ್ರಕಾಶ್, ಶ್ವೇತಾಭಟ್, ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿಯವರು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗ, ಡಯಟ್‍ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, 34 ಶೈಕ್ಷಣಿಕ ಜಿಲ್ಲೆಗಳಿಂದ ಭಾಗವಹಿಸಿದ್ದ 374 ಸ್ಪರ್ಧಾಳುಗಳು, ವಿದ್ಯಾರ್ಥಿಗಳು 68 ಮೇಲ್ವಿಚಾರಕ ಶಿಕ್ಷಕರು ಮತ್ತಿತರರಿದ್ದರು. ಶಿಕ್ಷಕರಾದ ಎಂ.ಕೆ ಕೋಕಿಲ ಮತ್ತು ಸ್ಮಿತಾ ಪ್ರಾರ್ಥಿಸಿದರು. ಉಪನ್ಯಾಸಕ ಆರ್.ನಾಗರಾಜು ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ ವಂದಿಸಿದರು. ಎಚ್.ಗೋವಿಂದಪ್ಪ ನಿರೂಪಿಸಿದರು.

Share this article