ಬಾಲಮಂದಿರ ಮಕ್ಕಳು ಸಮಾಜದಲ್ಲಿ ಬೆರೆಯುವಂತಾಗಲಿ

KannadaprabhaNewsNetwork |  
Published : Sep 03, 2025, 01:02 AM IST
(ಫೋಟೋ 2ಬಿಕೆಟಿ1, ಮಕ್ಕಳ ಸರ್ವತೋಮುಖ ಬೆಳವಣಿಗೆಯ ಕುರಿತು ಸಮಾಲೋಚನಾ ಸಭೆಯ ಉದ್ಘಾಟಿನೆ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಾಲ ಮಂದಿರದಲ್ಲಿರುವ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬೆರೆಯುವಂತೆ ಮಾಡುವ ಮೂಲಕ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಲ ಮಂದಿರದಲ್ಲಿರುವ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬೆರೆಯುವಂತೆ ಮಾಡುವ ಮೂಲಕ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಕರ, ಬಾಲಕಿಯರ ಬಾಲ ಮಂದಿರ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಜರುಗಿದ ಮಕ್ಕಳ ಸರ್ವತೋಮುಖ ಬೆಳವಣಿಗೆ ಕುರಿತು ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಒಂದೊಂದು ಪ್ರತಿಭೆ, ಕಲೆ, ಕೌಶಲ್ಯ ಹಾಗೂ ನೈಪುಣ್ಯತೆ ಇರುತ್ತದೆ. ಪ್ರತಿ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಸಮಾಜದಲ್ಲಿ ಉತ್ತಮವಾಗಿ ಬೆರೆಯುವಂತೆ ಮಾಡಬೇಕು. ಪ್ರತಿ ತಿಂಗಳು ಬಾಲ ಮಂದಿರಗಳಿಗೆ ಭೇಟಿ ನೀಡಿದಾಗ ಮಕ್ಕಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಅದೇ ರೀತಿ ಇನ್ನೂ ಹೆಚ್ಚು ಕಾರ್ಯಗಳು ನಡೆಯಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮಕ್ಕಳು ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯುವ ಮೂಲಕ ಧೈರ್ಯದಿಂದ, ಛಲದಿಂದ ಬದುಕು ಕಟ್ಟಿಕೊಳ್ಳಬೇಕು. ಬಾಲಮಂದಿರದ ಮಕ್ಕಳೊಟ್ಟಿಗೆ ನಾವೆಲ್ಲರೂ ಇದ್ದೇವೆ. ಜಿಲ್ಲಾಡಳಿತ ಪ್ರತಿ ಹಂತದಲ್ಲಿಯೂ ನಿಮ್ಮ ಜೊತೆಗೆ ಇರುತ್ತದೆ. ನೀವು ಯಾವತ್ತೂ ನಿಮಗೆ ಬೇಕಾದ ಸೌಲಭ್ಯ ಪಡೆಯಲು ಹೆದರಬೇಕಿಲ್ಲ. ಧೈರ್ಯದಿಂದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ಎಂದು ಪ್ರೇರೇಪಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಬಾಲಮಂದಿರದಲ್ಲಿರುವ ಮಕ್ಕಳಲ್ಲಿ ವಿವಿಧ ಪ್ರತಿಭೆಗಳಿದ್ದು, ಆ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಸಕಲ ಸಿಬ್ಬಂದಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಜೊತೆಗೆ ಬಾಲಮಂದಿರಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ವಿಶೇಷ ಕಾರ್ಯಗಳಿಂದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಆಗಲಿ ಎಂದು ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಪ್ರಭಾಕರ ಕೆ. ಮಾತನಾಡಿ, ಸರ್ಕಾರಿ ಬಾಲಮಂದಿರದ ಮಕ್ಕಳಿಗಾಗಿ ಜಿಲ್ಲಾ ಆಡಳಿತದಿಂದ ಸಾಕಷ್ಟು ಸಹಕಾರ ಇದ್ದು, ಇಲಾಖೆಯು ಇನ್ನೂ ಹೆಚ್ಚು ಮಕ್ಕಳ ಕಾರ್ಯಗಳಲ್ಲಿ ತೊಡಗಿ ಜಿಲ್ಲೆಯ ಕೀರ್ತಿ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪ್ರಾರಂಭದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳ ಕೇಂದ್ರೀತ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯುತು. ಸಮಾಲೋಚನಾ ಸಭೆಯಲ್ಲಿ ಬೆಂಗಳೂರು ಮಕ್ಕಳ ಜಾಗೃತಿ ಸಂಸ್ಥೆಯ ಪ್ರೀತಿ, ಜಿಲ್ಲಾ ಆರೋಗ್ಯ ಇಲಾಖೆಯ ಶಿವನಗೌಡ ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸಿದ್ದನಗೌಡ ಅರಸಿಕೆರೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

---------------

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ