ಕನಕಪುರ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಹೇಳಿದರು.
ಹಿಂದೆ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಆಡಳಿತ ಪಕ್ಷದ ಸಚಿವರ ಮೇಲೆ ಆರೋಪ ಕೇಳಿ ಬಂದಾಗ ರಾಜೀನಾಮೆ ನೀಡುವಂತೆ ಅಬ್ಬರಿಸುತ್ತಿದ್ದರು. ಇಂದು ಅವರ ಮೇಲಿನ ಆರೋಪ ಸಾಬೀತಾದರೂ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳುತ್ತಿರುವುದು, ಅವರ ಅಧಿಕಾರದ ಲಾಲಸೆ ಸಾಬೀತುಪಡಿಸುತ್ತದೆ ಎಂದು ಕಿಡಿಕಾರಿದರು.
ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದ ದಿನದಿಂದ ಎದುರಾಳಿಗಳ ಮೇಲೆ ದ್ವೇಷದ ರಾಜಕಾರಣ ಮಾಡುತ್ತಾ ಈಗಾಗಲೇ ಕೇಂದ್ರ ಮಂತ್ರಿ ನಿರ್ಮಲಾ ಸೀತಾರಾಮನ್ ರವರ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಅವರ ರಾಜೀನಾಮೆಗೂ ಆಗ್ರಹಿಸಿದ್ದು, ಕುಮಾರಸ್ವಾಮಿಯವರ ಮೇಲೆ ಸಹ ಆರೋಪ ಮಾಡಿದ್ದು, ಅವರ ಮೇಲೆ ಎಫ್‌ಐಆರ್ ದಾಖಲಾದರೆ ನಮ್ಮ ಸಂಘಟನೆ ಅವರ ರಾಜೀನಾಮೆಗೂ ಆಗ್ರಹಿಸುತ್ತದೆ ಎಂದು ತಿಳಿಸಿದರು.ಕಂದಾಯ ಇಲಾಖೆಯ ಅಧಿಕಾರಿಗಳು ಕಳೆದ 5 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು, ರೈತರು ದಿನಂಪ್ರತಿ ತಾಲೂಕು ಕಚೇರಿಗಳಿಗೆ ಎಡೆತಾಕುತ್ತಿದ್ದು ಹಣ, ಸಮಯ ವ್ಯರ್ಥವಾಗುತ್ತಿರುವುದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಅದರ ಅರಿವೇ ಇಲ್ಲ. ಇದು ಹೀಗೆಯೇ ಮುಂದುವರೆದರೆ ರಾಜ್ಯದ ಕೋಟ್ಯಾಂತರ ಜನರ ಪಾಡೇನು ? ಈಗಲೂ ಸರ್ಕಾರ ಇದೇ ನಿರ್ಲಕ್ಷ್ಯ ವಹಿಸಿದರೆ ಜನ ಬೀದಿಗಿಳಿದು ಕಲ್ಲು ಹೊಡೆಯುವ ದಿನ ದೂರ ಉಳಿದಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ರಕ್ಷಣ ವೇದಿಕೆಯ ಕನ್ನಡ ಭಾಸ್ಕರ್ ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿದ್ದರು.