ಮುಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಬಿಎಸ್ಪಿ

KannadaprabhaNewsNetwork |  
Published : Aug 22, 2024, 01:03 AM ISTUpdated : Aug 22, 2024, 06:02 AM IST
21ಸಿಎಚ್‌ಎನ್‌52ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

 ಮುಡಾ ಹಗರಣ ಆರೋಪ ಮುಕ್ತರಾಗುವವರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

  ಚಾಮರಾಜನಗರ :  ಮುಡಾ ಹಗರಣ ಆರೋಪ ಮುಕ್ತರಾಗುವವರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ಮೇಲೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಅದನ್ನು ಬಿಟ್ಟು ನಾನು ಭ್ರಷ್ಟಾಚಾರ ಮಾಡಿಲ್ಲ. ನಾನೊಬ್ಬ ಸಮಾಜವಾದಿ. ನಾನೊಬ್ಬ ನಿಷ್ಕಳಂಕ ರಾಜಕಾರಣಿ ಎಂದು ಮಾತನಾಡಿ ಸಮರ್ಥನೆ ಮಾಡಿಕೊಳ್ಳವುದು ಸರಿಯಲ್ಲ. ನಿಮ್ಮ ಮೇಲೆ ಆರೋಪ ಬಂದಿದೆ ಸತ್ಯವೊ, ಸುಳ್ಳೋ ತನಿಖೆ ಆಗುವವರೆಗೆ ನೀವು ಆರೋಪಿ ಸ್ಥಾನದಲ್ಲಿರುತ್ತೀರಿ. ಹಾಗಾಗಿ ಆರೋಪ ಮುಕ್ತರಾಗುವವರೆಗೆ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸಕ್ಕೆ ಮುಂದೆ ಬರಬೇಕು, ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ತುಂಬಿದ್ದರು, ರಾಜ್ಯದಲ್ಲಿ ಒಬ್ಬ ಎಸ್ಸಿ, ಎಸ್ಟಿ ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯನವರು ನಾನು ಸಮಾಜವಾದಿ, ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವ ವ್ಯಕ್ತಿ ಎಂದು ಹೇಳುವ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವುದೇ ಆದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಬ್ಬ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ನೀವು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ಬಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನವನ್ನು ತೆರವು ಮಾಡಿ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷ ಸ್ಥಾನವನ್ನು ಬಿಟ್ಟು ಕೊಟ್ಟರು. ಅವರು ಕೇಂದ್ರದ ರಾಜಕಾರಣಕ್ಕೆ ಹೋದರು. ಇದರಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೊಡ್ಡ ಅನ್ಯಾಯವಾಯಿತು. 2014ರಲ್ಲಿ ಮುಖ್ಯಮಂತ್ರಿ ಆಗಬೇಕಾದವರು ಜಿ.ಪರಮೇಶ್ವರ್. ಅವರು ಗೆಲ್ಲಿಬಾರದು ಅಂತ ಹೇಳಿ ಸೋಲಿಸಿದರು ಎನ್ನುವ ಅಪವಾದ ಸಿದ್ದರಾಮಯ್ಯನವರ ಮೇಲಿದೆ. ಹಾಗಾಗಿ ಸಿದ್ದರಾಮಯ್ಯ ಅವರಿಂದ ಜಿ.ಪರಮೇಶ್ವರಗೂ ಅನ್ಯಾಯವಾಗಿದೆ ಸಿದ್ದರಾಮಯ್ಯ ಅವರಿಗೆ ಎಸ್ಸಿ, ಎಸ್ಟಿಗಳ ಋಣತೀರಿಸಲು ಒಂದು ಅವಕಾಶ ಸಿಕ್ಕಿದೆ. ಅವರು ನಿಷ್ಕಳಂಕ ರಾಜಕಾರಣಿ ಎಂದು ಸಾಬೀತುಪಡಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಸಿದ್ದರಾಮಯ್ಯ ಅವರು ಪ್ರತಿಪಾದನೆ ಮಾಡುವ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದಕ್ಕೆ ದಲಿತ ಮುಖ್ಯಮಂತ್ರಿ ನೇಮಕ ಮಾಡಲು ಅವಕಾಶ ಮಾಡಿಕೊಡಬೇಕು. ಎಸ್ಸಿ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಅಥವಾ, ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ ಅವರಿಗಾಗಲಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಅವರಿಗಾಗಲಿ ಮುಖ್ಯಮಂತ್ರಿ ಮಾಡುವ ಮೂಲಕ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದರು.

ಎಚ್‌ಡಿಕೆ ವಿರುದ್ಧ ತನಿಖೆಗೆ ಆದೇಶಿಸಲಿ:

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಿ ಲೋಕಾಯುಕ್ತರು ಪ್ರಾಸಿಕ್ಯೂಷನ್ ಅನುಮತಿ ನೀಡಬೇಕು. ರಾಜ್ಯಪಾಲರನ್ನು ಕೇಳಿದ್ದಾರೆ. ಹಾಗಾಗಿ ರಾಜ್ಯಪಾಲರು ಕುಮಾರಸ್ವಾಮಿ ಅವರ ಮೇಲೆ ಕೂಡಲೇ ಪ್ರಾಸಿಕೂಷನ್ ಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರಾಜಕಾರಣದಲ್ಲಿ ಸ್ವಚ್ಛ ರಾಜಕಾರಣ ಆಗಬೇಕಾಗಿರುವುದರಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಪಕ್ಷಗಳ ಶಾಸಕರು, ಸಚಿವರು, ಮಾಜಿ ಶಾಸಕರು, ಸಚಿವರ ಮೇಲೆ ಏನೇನು ಆರೋಪಗಳು ಇದೆ ಅದೆಲ್ಲ ಲೋಕಾಯುಕ್ತ ತನಿಖೆ ಆಗಲಿ ಎಂದರು.

ಸ್ವೀಕರ್ ಹಂತದಲ್ಲಿ ಯಾವ್ಯಾವ ಪ್ರಕರಣ ಬಾಕಿ ಇದೆ. ಅಂತಹ ಪ್ರಕರಣಗಳ ತನಿಖೆಗೆ ಅನುಮತಿ ಕೊಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಎಸ್ ಒಳಗಡೆ ಸ್ವಚ್ಛ ರಾಜಕಾರಣ ತರಲಿಕ್ಕೆ ಅವರ ಆರೋಪಗಳ ಮೇಲೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಸಂಯೋಜಕ ರಾಜಶೇಖರ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಭೈರಲಿಂಗಸ್ವಾಮಿ ಹಾಜರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು