- ಚನ್ನಪಟ್ಟಣದಲ್ಲಿ ಜಮೀರ್ ಹಣ ಹಂಚುವ ವೀಡಿಯೋವಿದ್ದು, ದೂರು ದಾಖಲು: ಬಿಜೆಪಿ ಮುಖಂಡ ಆರ್.ಅಶೋಕ ಹೇಳಿಕೆ
- ಅಧಿಕಾರಕ್ಕೆ ಬಂದ 16 ತಿಂಗಳಲ್ಲೇ 16 ದೊಡ್ಡ ಭ್ರಷ್ಟಾಚಾರ । ಉಪ ಚುನಾವಣೆ ಹಣ ಬಲ ವರ್ಸಸ್ ಜನಬಲ: ಅಶೋಕ್ - - - ಕನ್ನಡಪ್ರಭ ವಾರ್ತೆ ದಾವಣಗೆರೆಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ಸಿನವರು ₹900 ಕೋಟಿ ಲಿಕ್ಕರ್ ದುಡ್ಡನ್ನೇ ಹಣದ ಹೊಳೆಯಾಗಿ ಹರಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಸ್ವತಃ ಸಚಿವ ಜಮೀರ್ ಅಹಮ್ಮದ್ ಓಪನ್ ಆಗಿ ಹಣ ಹಂಚುವ ವೀಡಿಯೋ ಬಂದಿದೆ. ಈ ಬಗ್ಗೆ ಜಮೀರ್ ವಿರುದ್ಧ ದೂರು ನೀಡಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ನಗರದ ಜಿಎಂಐಟಿ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾದಲ್ಲಿ ಜಮೀರ್ ಅಹಮ್ಮದ್ ಏನಾದರೂ ಕರಿಯ ಅಂತಾ ಹೇಳಿದ್ದರೆ ಪ್ರಕರಣ ದಾಖಲಾಗುತ್ತಿತ್ತು. ಕರಿಯ ಎಂಬ ಪದವನ್ನು ಹೇಳಿದವರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಕಕ್ಕೆ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಮೂರೂ ಕ್ಷೇತ್ರಗಳ ಉಪ ಚುನಾವಣೆ ಹಣ ಬಲ ವರ್ಸಸ್ ಜನಬಲ ಎಂಬಂತಾಗಿದೆ. ಉಪ ಚುನಾವಣೆಗೆ ಕಾಂಗ್ರೆಸ್ ಭ್ರಷ್ಟಾಚಾರದ ಹಣದ ಬಗ್ಗೆ ಕೇಂದ್ರ, ರಾಜ್ಯ ಚುನಾವಣಾ ಆಯೋಗಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಲಿಕ್ಕರ್ ಲಾಬಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಕ್ಕೆ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ಸಿಗರು ಸಾಕ್ಷಿ ಕೇಳುತ್ತಿದ್ದಾರೆ. ಹಣಕಾಸು ಕಾರ್ಯದರ್ಶಿಯು ಲಿಕ್ಕರ್ ದೂರಿನ ಬಗ್ಗೆ ಸಭೆ ಮಾಡಿದ್ದಕ್ಕಿಂತ ಸಾಕ್ಷಿ ಬೇಕೆ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 16 ತಿಂಗಳಲ್ಲೇ 16 ದೊಡ್ಡ ದೊಡ್ಡ ಭ್ರಷ್ಟಾಚಾರ ಮಾಡಿದೆ. ಕಳೆದ ಅಧಿವೇಶನದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಹಗರಣವೊಂದೇ ಇತ್ತು. ಈಗ ಬರುವ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಪೂರ್ತಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದ ಒಬ್ಬೊಬ್ಬರ ಬ್ರಹ್ಮಾಂಡ ಭ್ರಷ್ಟಾಚಾರವನ್ನೂ ಮುಂದಿಡಬೇಕಾಗುತ್ತದೆ. ಇದೀಗ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಸಿಎಂಗೆ ಬುದ್ಧಿ ಎಂಬುದೇ ಒಂದು ತರಹ ಆಗಿಹೋಗಿದೆ. ಮುಡಾ ಸೈಟ್ ಹಗರಣ, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ನಂತರ ಸಿದ್ದರಾಮಯ್ಯ ಅವರಿಗೆ ದೇವರು ನೆನಪಾಗುತ್ತಿದ್ದಾರೆ. ಈ ಸರ್ಕಾರವಂತೂ ಬಹಳ ದಿನ ಉಳಿಯಲ್ಲ. ಮುಂದಿನ ಅಧಿವೇಶನದೊಳಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬಹುದು ಎಂದು ಅವರು ಭವಿಷ್ಯ ನುಡಿದರು.ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೊಂದು ಕೇಸ್ ಮಾಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಇಂತಹ ಕೇಸ್‌ಗಳಿಗೆಲ್ಲಾ ಯಡಿಯೂರಪ್ಪ ಜಗ್ಗುವವರಲ್ಲ. ಹೋರಾಟದಿಂದಲೇ ಬಂದ ಯಡಿಯೂರಪ್ಪ ಅದನ್ನೆಲ್ಲಾ ಎದುರಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಂಗ್ರೆಸ್‌ನವರು ಹಗರಣಗಳಲ್ಲಿ ಸಿಲುಕಿ ಹತಾಶರಾಗಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಬಯಲಿಗೆ ಬಂದ ನಂತರ ಅವುಗಳನ್ನೆಲ್ಲಾ ಮುಚ್ಚಿ ಹಾಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಟುಕಿದರು.
17 ತಿಂಗಳ ಕಾಲ ನಿಮ್ಮ ತಲೆಯಲ್ಲಿ ಮಿದುಳು ಇರಲಿಲ್ವಾ? ಆಗ ಯಾವುದೇ ಹಗರಣ ಇರಲಿಲ್ಲ. ಯಾವ ತನಿಖೆಯೂ ಇರಲಿಲ್ಲ. ಮುಡಾ ಸೈಟ್ ಹಗರಣದಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಈಗ ವಿಪಕ್ಷದವರ ಮೇಲೆ ಹಗರಣಗಳ ಆರೋಪ ಹೊರಿಸಿ, ಬೆನ್ನಟ್ಟಿದ್ದಾರೆ. ಕೊರೋನಾ ಖರೀದಿ ಮಾಡುವ ಅಧಿಕಾರ ಅಧಿಕಾರಿಗಳದ್ದಾಗಿರುತ್ತದೆ. ಅದಕ್ಕೆ ಅಧಿಕಾರಿಗಳ ಸಮಿತಿ ಇರುತ್ತದೆ. ಅದರಲ್ಲಿ ಯಡಿಯೂರಪ್ಪನವರ ಪಾತ್ರ ಏನಿರುತ್ತದೆ? ಕೊರೋನಾ ಅವಧಿ ಖರೀದಿ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರನ್ನು ತನಿಖೆಗೆ ನೇಮಿಸಿದ್ದಾರೆ ಎಂದು ಅವರು ಟೀಕಿಸಿದರು.ಕೆಂಪಣ್ಣ ಆಯೋಗವು ನೋಟಿಸ್ ಕೊಟ್ಟಿತ್ತು. ಕೋವಿಡ್ ಹಗರಣದಲ್ಲಿ ಮಧ್ಯಂತರ ವರದಿ ನೀಡಿರುವ ನ್ಯಾ.ಕುನ್ಹಾ ಆಯೋಗವೂ ನೋಟಿಸ್ ನೀಡಬಹುದಿತ್ತಲ್ಲವೇ? ರಾಜ್ಯದಲ್ಲಿ ಐದಾರು ದಶಕಗಳ ಆಳಿದ ಕಾಂಗ್ರೆಸ್ ಸರ್ಕಾರಗಳ ಹಗರಣಗಳನ್ನು ಹೊರಗೆ ತೆಗೆದರೆ, ಇಡೀ ರಾಜ್ಯ ಲೂಟಿ ಹೊಡೆದಿರುವವರು ಕಾಂಗ್ರೆಸ್ಸಿನವರು ಅನ್ನೋದು ತಿಳಿಯುತ್ತದೆ. ವಿಪಕ್ಷದವರ ಮೇಲೆ ಕೇಸ್, ತನಿಖೆ ಅಂತೆಲ್ಲಾ ಮಾಡಿ, ಅನ್ಯಾಯ, ಹಗರಣ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ವಿರೋಧ ಪಕ್ಷಗಳನ್ನು ಮಟ್ಟ ಹಾಕುವ ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯೆಂದು, ರಾಜ್ಯಪಾಲರನ್ನು ಬಿಜೆಪಿ ಏಜೆಂಟರೆಂದು ಟೀಕಿಸುವ ಕಾಂಗ್ರೆಸ್‌ನವರ ಅಧಿಕಾರದಲ್ಲಿ ಭಾರದ್ವಾಜ ಅವರು ರಾಜ್ಯಪಾಲರಿದ್ದಾಗ ರಾಜಭವನದ, ರಾಜ್ಯಪಾಲರ ಕಚೇರಿಗಳು ಏನು ಆಗಿದ್ದವು? ರಾಜಭವನ, ರಾಜ್ಯಪಾಲರ ಕಚೇರಿಯಲ್ಲೇ ಕಾಂಗ್ರೆಸ್ಸಿನವರ ಕಾಫಿ, ಟೀ ಇರುತ್ತಿತ್ತು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ವಿಪಕ್ಷವಾಗಿ ಬಿಜೆಪಿ ಪ್ರಸ್ತಾಪ ಮಾಡಿತ್ತು. ಆದರೆ, ಸಿದ್ದರಾಮಯ್ಯ ಅದನ್ನು ಅರ್ಥ ಮಾಡಿಕೊಳ್ಳದೇ, ಹಿಂಬಾಲಕರ ಮಾತುಕೇಳಿ ಹಾಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು.ಮುಡಾ ನಿವೇಶನ ಹಗರಣಗಳ ಬಗ್ಗೆಯೂ ಬಿಜೆಪಿ ಪ್ರಸ್ತಾಪಿಸಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಪತ್ನಿ ಪಡೆದಿದ್ದ ನಿವೇಶನಗಳ ದರವನ್ನು ಫಿಕ್ಸ್ ಮಾಡಿಕೊಂಡು, ಬೋನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನಾವು ಈಗಾಗಲೇ 1500 ನಿವೇಶನಗಳ ಬಗ್ಗೆ ಸಂಪೂರ್ಣ ವಿವರ ಕೇಳಿದ್ದೇವೆ. ಅದು ನಮ್ಮ ಕೈ ಸೇರುತ್ತಿದ್ದಂತೆಯೇ ಮತ್ತಷ್ಟು ಹಗರಣಗಳು ಸಹ ಹೊರಬೀಳಲಿವೆ ಎಂದು ಆರ್.ಅಶೋಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಎನ್.ರವಿಕುಮಾರ, ಕೆ.ಎಸ್. ನವೀನ, ಎಸ್.ವಿ.ರಾಮಚಂದ್ರ, ಜಿ.ಎಸ್.ಅನಿತ್ ಕುಮಾರ ಇದ್ದರು.- - -
ಬಾಕ್ಸ್ * ಅಧಿವೇಶನಕ್ಕೆ ಮುನ್ನವೇ ಸಿಎಂ ರಾಜೀನಾಮೆ: ಅಶೋಕ ಭವಿಷ್ಯ ಕನ್ನಡಪ್ರಭ ವಾರ್ತೆ, ದಾವಣಗೆರೆ ವಾಲ್ಮೀಕಿ ಹಗರಣ, ಮುಡಾ ನಿವೇಶನ ಹಗರಣ ಬಳಿಕ ಇದೀಗ ಲಿಕ್ಕರ್ ಹಣ ಸದ್ದು ಮಾಡುತ್ತಿದೆ. ಹೀಗೆ ಸಾಲು ಸಾಲು ಹಗರಣಗಳಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ. ಮುಂದಿನ ಅಧಿವೇಶನ ಆಗುವಷ್ಟರಲ್ಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಭವಿಷ್ಯ ನುಡಿದರು.ನಗರದ ಜಿಎಂಐಟಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಸ್ಪಷ್ಟವಾಗಿದೆ. ಹಾಗಾಗಿಯೆ ಕಾಂಗ್ರೆಸಿಗರು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾ, ವಿಪಕ್ಷದವರಿಗೆ ಬೆದರಿಕೆ ಹಾಕುವ ಮೂಲಕ ಕಟ್ಟಿ ಹಾಕಲು ನೋಡುತ್ತಿದ್ದಾರೆ. ಇದ್ಯಾವುದೂ ನಡೆಯುವುದಿಲ್ಲ ಎಂದರು.
ಕಳೆದ 17 ತಿಂಗಳಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿನ ತಲೆಯಲ್ಲಿ ಏನಿತ್ತು? ಕಾಂಗ್ರೆಸ್ ಸರ್ಕಾರದಲ್ಲಿರುವ ಅನೇಕರು ಜೈಲಿಗೆ ಹೋಗುವ ಪರಿಸ್ಥಿತಿ ಇದೆ. ಇನ್ನು ಐದಾರು ದಶಕ ರಾಜ್ಯವನ್ನಾಳಿದ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದ್ದನ್ನು ಹೊರಗೆ ತೆಗೆದರೆ, ಕಾಂಗ್ರೆಸ್ಸಿಗರ ಮನೆಗಳಿಗೆ ಬೀಗ ಹಾಕಬೇಕಾಗುತ್ತದಷ್ಟೇ ಎಂದು ಟೀಕಿಸಿದರು.ಹಗರಣದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಆಕ್ಸಿಜನ್ ಬೇಕು. ಅದಕ್ಕಾಗಿ ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡುವಾಗ ಸ್ವತಃ ಸಿದ್ದರಾಮಯ್ಯ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಂದಲೇ ಕೆಟ್ಟಿದ್ದಾರೆ ಎಂದು ಅವರು ದೂರಿದರು.
- - -ಟಾಪ್ ಕೋಟ್ ಮುಡಾ ಸೈಟ್‌ಗಳಿಗೆ ಮುಖ್ಯಮಂತ್ರಿ ಅವರೇ ದರ ನಿಗಿದಪಡಿಸಿಕೊಂಡು, ತಾವೇ ಬೋನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ತಾವು ತೆರೆದ ಪುಸ್ತಕ ಎಂಬುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆ ತೆರೆದ ಪುಸ್ತಕವನ್ನು ತೆರೆದರೆ, ಅದರಲ್ಲಿ ₹69 ಕೋಟಿನೇ ಕಾಣಿಸುತ್ತೆ- ಆರ್.ಅಶೋಕ, ವಿಪಕ್ಷ ನಾಯಕ
- - - -12ಕೆಡಿವಿಜಿ1, 2:ದಾವಣಗೆರೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಎನ್.ರವಿಕುಮಾರ, ಕೆ.ಎಸ್.ನವೀನ, ಎಸ್.ವಿ. ರಾಮಚಂದ್ರ, ಜಿ.ಎಸ್.ಅನಿತ್‌ಕುಮಾರ ಇದ್ದರು.