ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆ ನಿದ್ರಿಸುತ್ತಿದೆ, ಜನರ ಹಿತ ಮರೆತಿದೆ, ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ. ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ. ಆದರೆ ಈ ಅಧಿಕಾರಿಗಳು ನಗರದ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಹೀಗಾಗಿ ಸರ್ಕಾರ ಪಾಲಿಕೆಯ ಚುನಾವಣೆಯನ್ನು ಶೀಘ್ರವೇ ಘೋಷಿಸಬೇಕು ಎಂದು ಒತ್ತಾಯಿಸಿದರು.
ಆದಷ್ಟು ಬೇಗ ನಗರದ ಸುವ್ಯವಸ್ಥೆ ಕಾಪಾಡಲು ಅಭಿವೃದ್ಧಿಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಹಾಗಾಗಿ ಆದಷ್ಟು ಬೇಗಾ ಚುನಾವಣೆ ಘೋಷಣೆಯಾಗಬೇಕು. ಇಡೀ ನಗರದಲ್ಲಿ ಸ್ವಚ್ಛತೆಯಿಲ್ಲದೆ, ಕಸದ ರಾಶಿ ಎಲ್ಲೆಡೆ ಕಂಡು ಬರುತ್ತಿದೆ. ಅವ್ಯವಸ್ಥೆಯ ಆಗರವಾಗಿದೆ. ಸೊಳ್ಳೆ ನಿಯಂತ್ರಣ ಇಲ್ಲವೇ ಇಲ್ಲ. ಪರಿಣಾಮ ನಗರದಲ್ಲೆಡೆ ಡೆಂಗ್ಯೂ ಜ್ವರ ಸೇರಿದಂತೆ ಇತರ ಸಾಮಾನ್ಯ ಜ್ವರಗಳು ಕಾಣಿಸಿ ಕೊಳ್ಳ ತೊಡಗಿವೆ ಎಂದು ದೂರಿದರು.ಸಣ್ಣ ಸಣ್ಣ ಗಲ್ಲಿಯ ಆಸ್ಪತ್ರೆಗಳಲ್ಲೂ ಸಾರ್ವಜನಿಕರು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಹಂದಿ, ನಾಯಿಗಳ ಕಾಟ ಬೇರೆ, ಒಟ್ಟಾರೆ ಇಡೀ ನಗರದ ಚಿತ್ರಣವೇ ಬದಲಾಗಿದೆ ಎಂದ ಅವರು, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ, 24X7 ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಸ್ವಲ್ಪ ಮಳೆ ಬಂದರೂ ಸಾಕು, ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗುತ್ತದೆ. ರಾಜಕಾಲುವೆ ಸೇರಿದಂತೆ ಚರಂಡಿ, ಹೂಳು ತುಂಬಿದೆ. ಪರಿಣಾಮ ಕೊಳಚೆ ನೀರು, ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲವು ಕಡೆ ಕುಡಿಯುವ ನೀರಿನ ನಳಗಳಿಗೂ ಹೋಗುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಮುಖಂಡರಾದ ದೀಪಕ್ ಸಿಂಗ್, ನರಸಿಂಹ ಗಂಧದ ಮನೆ, ತ್ಯಾಗರಾಜ್, ರಾಮಕೃಷ್ಣ ಸೇರಿದಂತೆ ಹಲವರಿದ್ದರು.