ಹೊಸಪೇಟೆ: ವೀರ ರಾಣಿ ಕಿತ್ತೂರು ಚೆನ್ನಮ್ಮರ ಧೈರ್ಯ, ಶಕ್ತಿ ಪ್ರತಿ ಮಹಿಳೆಯರಿಗೆ ಪ್ರೇರಣೆ ಆಗಲಿ. ಬ್ರಿಟಿಷ್‌ರಿಗೆ ಪಾಠ ಕಲಿಸಿದ ಅವರು ನಮಗೆ ಮಾದರಿ ಆಗಬೇಕು ಎಂದು ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಗರಸಭೆ ವತಿಯಿಂದ ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಕ್ಕಿನಿಂದ ಮೆರೆಯುತಿದ್ದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ವೀರ ರಾಣಿ ಚನ್ನಮ್ಮಳ ಸಾಧನೆ ಶ್ಲಾಘನೀಯ. ಅವರಂತೆ ಈ ನೆಲದಲ್ಲಿ ಸಹಸ್ರಾರು ಮಹಿಳೆಯರು ಹುಟ್ಟಿಬರಬೇಕು. ಮಹಿಳೆಯರು ಚೆನ್ನಮ್ಮಳ ದಿಟ್ಟತನ, ಸ್ವಾಭಿಮಾನ, ಹೋರಾಟದ ಛಲ ರೂಪಿಸಿಕೊಳ್ಳಬೇಕು ಎಂದರು.ಹೆಣ್ಣುಮಕ್ಕಳಲ್ಲಿ ಚೆನ್ನಮ್ಮಳ ಗುಣಗಳು ಬರಲು, ಪ್ರೇರಣೆ ನೀಡಲು ತಾಲೂಕಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹೆಸರಿನ ಶಾಲೆ ಆರಂಭಿಸಲಾಗುವುದು. ನಗರದ ಬಾಲಕಿಯರ ಸರ್ಕಾರಿ ಶಾಲೆಯನ್ನು ಚೆನ್ನಮ್ಮಳ ಹೆಸರಿಡಲು ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರದ ಆದೇಶ ಪಡೆದು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವಿಜಯಗಳಿಸಿ 200 ವರ್ಷ ಪೂರ್ಣವಾಗಿದೆ. ನಮ್ಮ ದೇಶ ಹಿಂದಿನ ಕಾಲದಿಂದಲೂ ಮಹಿಳಾ ಸ್ವಾತಂತ್ರ‍್ಯ ಹೊಂದಿತ್ತು ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಸಾಕ್ಷಿ. ಅನೇಕ ಮಹಾ ಪುರುಷರು, ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದ ಆಚರಣೆ ಮಾಡುವುದು ಅವರ ತತ್ವ ಸಿದ್ಧಾಂತ, ಸಾಧನೆಗಳನ್ನು ಮಕ್ಕಳಿಗೆ ತಿಳಿಸಿ ಮುಂದಿನ ಪೀಳಿಗೆಗೆ ತಲುಪಲುಪಿಸುವ ಉದ್ದೇಶ ಇದೆ ಎಂದರು.ಮೆರವಣಿಗೆ:
ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಿಂದ ಜಂಬುನಾಥ ರಸ್ತೆ, ಬಳ್ಳಾರಿ ರಸ್ತೆ ಮತ್ತು ವಡಕರಾಯ ದೇವಸ್ಥಾನದ ವೃತ್ತದ ಮೂಲಕ ವಿವಿಧ ಕಲಾ ತಂಡಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆ ಕೊಟ್ಟೂರುಸ್ವಾಮಿ ಮಠ ತಲುಪಿತು.ಕೊಟ್ಟೂರುಸ್ವಾಮಿ ಮಠದ ಶ್ರೀಬಸವಲಿಂಗ ಜಗದ್ಗುರು ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ತಹಸೀಲ್ದಾರ ಶೃತಿ ಎಂ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣನವರ ಮತ್ತು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಇದ್ದರು.