‘ಪಿಎಂ ರಾಹತ್’ಗೆ ದ.ಕ. ಮಾದರಿಯಾಗಲಿ: ಕ್ಯಾ.ಚೌಟ

KannadaprabhaNewsNetwork |  
Published : Jul 26, 2026, 02:45 AM IST
 | Kannada Prabha

ಸಾರಾಂಶ

ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರ ಪ್ರಾಣ ಉಳಿಸುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ರಾಹತ್‌ʼ ಯೋಜನೆಯನ್ನು ದಕ್ಷಿಣ ಕನ್ನಡದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಶನಿವಾರ ಮಂಗಳೂರಲ್ಲಿ ಆರೋಗ್ಯಾಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗಳ ಜತೆಗೆ ಮಹತ್ವದ ಸಭೆ ನಡೆಸಿದರು.

ಮಂಗಳೂರು: ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರ ಪ್ರಾಣ ಉಳಿಸುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ ರಾಹತ್‌ʼ ಯೋಜನೆಯನ್ನು ದಕ್ಷಿಣ ಕನ್ನಡದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಶನಿವಾರ ಮಂಗಳೂರಲ್ಲಿ ಆರೋಗ್ಯಾಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗಳ ಜತೆಗೆ ಮಹತ್ವದ ಸಭೆ ನಡೆಸಿದರು.

ಈ ಮೂಲಕ ಪಿಎಂ ರಾಹತ್‌ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ದಕ್ಷಿಣ ಕನ್ನಡವನ್ನು ಮಾದರಿ ಜಿಲ್ಲೆಯಾಗಿಸುವಂತೆ ಅವರು ಮನವಿ ಮಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಜಾರಿಗೆ ತಂದಿರುವ ಪಿಎಂ ರಾಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸೆ) ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತಂತೆ ಶಾಸಕ ವೇದವ್ಯಾಸ್ ಕಾಮತ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ತಿಮ್ಮಯ್ಯ ಹಾಗೂ ಡಿ.ಸಿ.ಪಿ ರವಿಶಂಕರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಂಸದರು ವಿವರವಾದ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಅವರ ಪ್ರಾಣ ರಕ್ಷಿಸುವಲ್ಲಿ ಪಿಎಂ ರಾಹತ್‌ ಅತ್ಯಂತ ಅವಶ್ಯಕ ಯೋಜನೆಯಾಗಿದೆ. ಒಂದು ವೇಳೆ ಆಸ್ಪತ್ರೆಗಳು ಯಾವುದೇ ಸಂತ್ರಸ್ತರನ್ನು ತುರ್ತು ಸಂದರ್ಭಗಳಲ್ಲಿ ದಾಖಲಿಸದೆ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ತೋರಿಸಿದರೆ ಅಂಥ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಪಿಎಂ ರಾಹತ್’ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಯಾವುದೇ ದಾಖಲೆಗಳ ತೊಡಕಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 7 ದಿನಗಳವರೆಗೆ ಗರಿಷ್ಠ 1.50 ಲಕ್ಷ ರ. ತನಕ ಉಚಿತ ತುರ್ತು ಚಿಕಿತ್ಸೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅಪಘಾತಕ್ಕೊಳಗಾದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಾರ್ವಜನಿಕರಲ್ಲಿ ಯಾವುದೇ ಭಯ ಅಥವಾ ಹಿಂಜರಿಕೆ ಇರಬಾರದು ಎಂಬ ದೃಷ್ಟಿಯಿಂದ ಪ್ರಧಾನಿಯವರು ಈ ಅತ್ಯುತ್ತಮ ಯೋಜನೆಯನ್ನು ತಂದಿದ್ದಾರೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಅಪಘಾತ ಸಂಭವಿಸಿದ ತುರ್ತು ಸಮಯದಲ್ಲಿ ಜೀವ ಉಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.

ಯೋಜನೆ ಬಳಕೆ ಹೇಗೆ?: ಯೋಜನೆ ಸೌಲಭ್ಯ ವಿಳಂಬವಿಲ್ಲದೆ ಸಿಗಲು ಆಸ್ಪತ್ರೆಗಳಿಗೆ e-DAR ನಮೂದು ಕಡ್ಡಾಯಗೊಳಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿ (ವಿಷಮ ಸ್ಥಿತಿಯಲ್ಲಿದ್ದರೆ ಗರಿಷ್ಠ 48 ಗಂಟೆಗಳಲ್ಲಿ) e-DAR ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸಬೇಕು. ಆಸ್ಪತ್ರೆ ನೀಡಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಪರಿಶೀಲಿಸಿ ಅನುಮೋದಿಸಿದ ತಕ್ಷಣ, ಅದು TMS ಪೋರ್ಟಲ್‌ಗೆ ರವಾನೆಯಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ದಾಖಲಿಸದಿದ್ದರೆ ಅರ್ಹ ಸಂತ್ರಸ್ತರು ಉಚಿತ ಚಿಕಿತ್ಸೆಯಿಂದ ವಂಚಿತರಾಗುವ ಅಪಾಯವಿರುವುದರಿಂದ, ಜಿಲ್ಲೆಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಂಸದರು ನಿರ್ದೇಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಕಾರಿ ಸಸ್ಯ ಬೆಳೆದು ಸ್ವಾವಲಂಬಿಗಳಾಗಿ: ಸುಮಾ ನಾಗರಾಜ ಹಾಸ್ಯಗಾರ
ಪೌರ ಕಾರ್ಮಿಕರು ನಾಡಿನ ದೊಡ್ಡ ಶಕ್ತಿ: ಆರ್.ವಿ. ದೇಶಪಾಂಡೆ