ಮದುವೆ, ಸಭೆಗಳಿಗೆ ಜನರನ್ನು ನೀವೇ ಸೀಮಿತಗೊಳಿಸಿ!

KannadaprabhaNewsNetwork |  
Published : Mar 21, 2026, 01:45 AM IST
ಸಮಾರಂಭಕ್ಕೆ ಸಿದ್ಧವಾದ ಅಡುಗೆ | Kannada Prabha

ಸಾರಾಂಶ

ಕೊಲ್ಲಿಯುದ್ಧ ಪೂರ್ಣವಾಗಿ ಗ್ಯಾಸ್‌ ಸಮಸ್ಯೆ ಬಗೆಹರಿಯುವವರೆಗೂ ಮದುವೆ, ಸಭೆ, ಸಮಾರಂಭಗಳಿಗೆ ಎಷ್ಟು ಜನರನ್ನು ಕರೆಯಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿ ಎಂದು ಸಭೆ-ಸಮಾರಂಭ ಆಯೋಜಿಸುವವರು ಒತ್ತಾಯಿಸಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಕೊಲ್ಲಿಯುದ್ಧ ಮುಗಿದು ಗ್ಯಾಸ್‌ ಸಮಸ್ಯೆ ಬಗೆಹರಿಯುವವರೆಗೂ ಮದುವೆ, ಸಭೆ, ಸಮಾರಂಭಗಳಿಗೆ ಎಷ್ಟು ಜನರನ್ನು ಕರೆಯಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿ!

ಇದು ಮದುವೆ, ಸಭೆ, ಸಮಾರಂಭಗಳನ್ನು ಆಯೋಜಿಸಿದವರ ಒಕ್ಕೊರಲಿನ ಆಗ್ರಹ. ಅತ್ತ ಕಮರ್ಷಿಯಲ್‌ ಸಿಲಿಂಡರ್‌ ಸಿಗ್ತಾ ಇಲ್ಲ. ಇತ್ತ ಸೌದೆ ಒಲೆಯ ಮೇಲೆ ಅಡುಗೆ ಮಾಡಲ್ಲ ಎಂದು ಬಾಣಸಿಗರು ಹೇಳ್ತಾರೆ. ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಆಗಿರುವುದೇನು?: ಕೊಲ್ಲಿ ಯುದ್ಧದ ಪರಿಣಾಮ ಎಲ್ಲೆಡೆ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಮೊದ ಮೊದಲು ಡೊಮೆಸ್ಟಿಕ್‌ ಸಿಲಿಂಡರ್‌ ಸಮಸ್ಯೆಯೂ ಜಾಸ್ತಿಯಾಗಿತ್ತು. ಅದೀಗ ಬಗೆಹರಿದಿದೆ. ಧಾರವಾಡ ಜಿಲ್ಲೆಯಲ್ಲಿ ಮನೆ ಬಳಕೆಯ 10,500 ಸಿಲಿಂಡರ್‌ ಬೇಡಿಕೆ ಇದೆ. ಅಷ್ಟು ಸರಬರಾಜು ಆಗುತ್ತಿದೆ. ಹೀಗಾಗಿ ಮನೆ ಬಳಕೆ ಗ್ರಾಹಕರಿಗೆ ಗ್ಯಾಸ್‌ನ ಸಮಸ್ಯೆಯಿಲ್ಲ. ಆದರೆ ಕಮರ್ಷಿಯಲ್‌ ಸಿಲಿಂಡರ್‌ ಸಮಸ್ಯೆ ಬಗೆಹರಿಯುತ್ತಿಲ್ಲ. ಧಾರವಾಡ ಜಿಲ್ಲೆಗೆ ಕಮರ್ಷಿಯಲ್‌ ಸಿಲಿಂಡರ್‌ 800-1000 ಬೇಡಿಕೆ ಇದೆ. ಆದರೆ ಸರಬರಾಜು ಆಗುವುದು ಬರೀ 200 ಅಂತೆ. ಕೆಲವೊಂದು ದಿನ 200 ಕೂಡ ಬರುವುದಿಲ್ಲವಂತೆ. ಹೀಗಾಗಿ ಬರುವ 200 ಸಿಲಿಂಡರ್‌ಗಳನ್ನು ಆಸ್ಪತ್ರೆ, ದೇವಸ್ಥಾನ, ಬಿಸಿಯೂಟ ಹೀಗೆ ಅಗತ್ಯ ಇರುವಲ್ಲಿ ಮಾತ್ರ ಪೂರೈಕೆ ಮಾಡಲಾಗುತ್ತಿದೆಯಂತೆ. ಹೀಗಾಗಿ ಕೈಗಾರಿಕೆಗಳಿಗಾಗಲಿ, ಹೋಟೆಲ್‌ಗಳಿಗಾಗಲಿ ಪೂರೈಕೆ ಮಾಡುತ್ತಿಲ್ಲ.

ಈಗೇನು ಸಮಸ್ಯೆ?: ಹೋಟೆಲ್‌ಗಳು ಸೌದೆ ಒಲೆಯತ್ತ ಗಮನಹರಿಸಿ ತಮ್ಮ ವಹಿವಾಟು ನಡೆಸುತ್ತಿವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಕೈಗಾರಿಕೆಗಳು ಉತ್ಪಾದನೆಯನ್ನು ಕಡಿಮೆ ಮಾಡಿಕೊಂಡಿವೆ. ಕೆಲವು ಕೈಗಾರಿಕೆಗಳಂತೂ ಉತ್ಪಾದನೆಯನ್ನೇ ಸ್ಥಗಿತ ಮಾಡಿವೆ. ಇವೆಲ್ಲವುಗಳ ಮಧ್ಯೆ ಮದುವೆ, ಸಭೆ-ಸಮಾರಂಭಗಳಿಗೆ ಕಮಿರ್ಷಿಯಲ್‌ ಸಿಲಿಂಡರ್‌ ಬಳಕೆಯಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಲಿಂಡರ್‌ ಸಿಗುತ್ತಿಲ್ಲ. ಮೊದಲು ಕಲ್ಯಾಣ ಮಂಟಪಗಳು ಸಿಲಿಂಡರ್‌ ಸಮೇತವಾಗಿ ಕೊಡುತ್ತಿದ್ದವು. ಇದೀಗ ಅವು ಕೂಡ ಸಿಲಿಂಡರ್‌ ಬಿಟ್ಟು ಬಾಡಿಗೆ ನಿಗದಿ ಪಡಿಸುತ್ತಿವೆ. ಬಾಣಸಿಗರು ಸೌದೆ ಒಲೆಯ ಮೇಲೆ ಅಡುಗೆ ಮಾಡುವುದಿಲ್ಲ. ಸಿಲಿಂಡರ್‌ ತಂದುಕೊಟ್ಟರೆ ಅಷ್ಟೇ ಅಡುಗೆ ಮಾಡಿಕೊಡುತ್ತೇವೆ, ಇಲ್ಲಂದ್ರೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ. ಇನ್ನು ಕಲ್ಯಾಣ ಮಂಟಪ ನಿಗದಿ ಮಾಡಿ ಅತಿಥಿಗಳಿಗೆಲ್ಲ ಆಮಂತ್ರಣ ಕೊಟ್ಟು ಬಂದಿರುವವರಿಗೆ ಸಮಸ್ಯೆಯಾಗುತ್ತಿದೆ.

ಅತ್ತ ಸಿಲಿಂಡರ್‌ ಸಿಗುತ್ತಿಲ್ಲ; ಇತ್ತ ಸೌದೆ ಮೇಲೆ ಅಡುಗೆ ಮಾಡಲ್ಲ ಎಂದು ಹೇಳುತ್ತಿದ್ದಾರೆ, ಏನ್ಮಾಡಬೇಕೋ ತಿಳಿವಲ್ತು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ಎಲ್ಲಿಂದಲೋ ಬ್ಲ್ಯಾಕ್‌ನಲ್ಲಿ ಸಿಲಿಂಡರ್‌ ತಂದರೆ ರೇಡ್‌ ಆದರೆ ಇನ್ನೂ ಕಷ್ಟ.

ನೀವೇ ನಿಯಮ ಮಾಡಿ: ಕೊರೋನಾ ಜೋರಾದ ಸಂದರ್ಭದಲ್ಲಿ ಇಂತಿಷ್ಟೇ ಜನ ಸೇರಬೇಕು ಎಂದು ಮದುವೆ ಸಭೆ-ಸಮಾರಂಭಗಳಿಗೆ ಸರ್ಕಾರ, ಜಿಲ್ಲಾಡಳಿತ ನಿಯಮ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಇದೀಗ ಸಿಲಿಂಡರ್‌ ಸಮಸ್ಯೆಯಿಂದಾಗಿ ಮದುವೆ ಸೇರಿದಂತೆ ಯಾವುದೇ ಸಭೆ-ಸಮಾರಂಭಗಳಿಗೆ ಇಂತಿಷ್ಟೇ ಜನ ಸೇರಬೇಕು ಎಂದು ಸರ್ಕಾರ, ಜಿಲ್ಲಾಡಳಿತ ನಿಯಮ ಮಾಡಿ ಆದೇಶ ಹೊರಡಿಸಬೇಕು. ಅಂದರೆ ನಾವು ಆಮಂತ್ರಣ ಪತ್ರ ಕೊಟ್ಟರೂ ಸರ್ಕಾರವೇ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಹೇಳುತ್ತಿದೆ, ಹೀಗಾಗಿ ಬರಬೇಡಿ ಎಂದು ಹೇಳಿಕೊಂಡು ಕುಟುಂಬದಲ್ಲೇ ಶುಭ ಕಾರ್ಯ ಮುಗಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಆಮಂತ್ರಣ ಕೊಟ್ಟವರಿಗೆ ಅದ್ಹೇಗೆ ಬರಬೇಡಿ ಎಂದು ಹೇಳಬೇಕೋ ತಿಳಿವಲ್ತು ಎಂದು ಮದುವೆ ನಿಗದಿಪಡಿಸಿರುವ ಹುಬ್ಬಳ್ಳಿಯ ರಮೇಶ ಎಂಬವರು ಹೇಳುತ್ತಾರೆ

ಒಟ್ಟಿನಲ್ಲಿ ಕಮಿರ್ಷಿಯಲ್‌ ಗ್ಯಾಸ್‌ ಸಿಗದೇ ಇರುವುದು ಇದೀಗ ಮದುವೆ ಸಮಾರಂಭಗಳಿಗೂ ಕುತ್ತು ತರುತ್ತಿರುವುದಂತೂ ಸತ್ಯ. ಹೀಗಾಗಿ ಮದುವೆ ಸಮಾರಂಭಕ್ಕೆ ಇಷ್ಟೇ ಜನ ಇರಬೇಕು ಎಂದು ನಿಗದಿಪಡಿಸಿ ಆದೇಶ ಹೊರಡಿಸುವುದು ಸೂಕ್ತ ಎಂಬ ಆಗ್ರಹವಂತೂ ಕೇಳಿಬರುತ್ತಿದೆ. ಸರ್ಕಾರ ಏನು ಮಾಡುತ್ತದೆ ಕಾಯ್ದು ನೋಡಬೇಕಷ್ಟೇ!

ಮದುವೆ ಸಮಾರಂಭವಿದೆ. ಆದರೆ ಸಿಲಿಂಡರ್‌ ಸಿಗ್ತಾ ಇಲ್ಲ. ಬಾಣಸಿಗರು ಸೌದೆ ಮೇಲೆ ಅಡುಗೆ ಮಾಡಲ್ಲ ಅಂತ ಹೇಳ್ತಾರೆ. ಹೋಟೆಲ್‌ಗೆ ಊಟದ ಜವಾಬ್ದಾರಿ ಕೊಡೋಣ ಎಂದರೆ ಅಲ್ಲೂ ಸಿಲಿಂಡರ್ ಸಮಸ್ಯೆಯಿಂದ ಅದು ಆಗ್ತಾ ಇಲ್ಲ. ಜಿಲ್ಲಾಡಳಿತವೇ ಇಷ್ಟೇ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಬೇಕು ಎಂದು ನಿಯಮ ಮಾಡಿದರೆ ಚೆನ್ನಾಗಿರುತ್ತದೆ ಎಂದು ಮದುವೆ ಆಯೋಜಿಸಿದ ಅನಿಲ್‌ ಜನಾದ್ರಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಂಕೇಶ ಸಾಹಿತ್ಯ ಸಾಧನೆ ಅನುಕರಣೀಯ-ಡಾ. ಮಾನ್ಪಡೆ
ಮಹಿಳೆಯರು ಸಬಲರಾದರೆ ಮಹಿಳಾ ದಿನಾಚರಣೆ ಸಾರ್ಥಕ