ಹಣ ವಸೂಲಿ ದಂಧೆ ವಿರುದ್ಧ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಲಿ

KannadaprabhaNewsNetwork | Published : Dec 27, 2024 12:46 AM

ಸಾರಾಂಶ

ಜಿಲ್ಲೆಯ ಕೆಲವು ಸರ್ಕಾರಿ ನೌಕರರು, ಆರ್‌ಟಿಒ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಮೇಯರ್ ಕೆ.ಚಮನ್ ಸಾಬ್ ಇತರರು ಮನವಿ ಸಲ್ಲಿಸಿದ್ದಾರೆ.

- ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ನೇತೃತ್ವದಲ್ಲಿ ಡಿಸಿಗೆ ಮನವಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಕೆಲವು ಸರ್ಕಾರಿ ನೌಕರರು, ಆರ್‌ಟಿಒ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಮೇಯರ್ ಕೆ.ಚಮನ್ ಸಾಬ್ ಇತರರು ಮನವಿ ಸಲ್ಲಿಸಿದರು.

ದಿನೇಶ ಕೆ. ಶೆಟ್ಟಿ ಮಾತನಾಡಿ, ಪ್ರತಿಷ್ಟಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ನೀಡಿ, ಹಣ ವಸೂಲಾತಿ ಮಾಡಲಾಗುತ್ತಿದೆ. ಅಲ್ಲದೇ, ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಷ್ಟಿತ ವ್ಯಕ್ತಿಗಳು ನಿರ್ಮಿಸಿರುವ, ನಿರ್ಮಿಸುತ್ತಿರುವ ಕಟ್ಟಡಗಳಿಗೆ ಪ್ಯಾಸೇಜ್ ಬಿಟ್ಟಿಲ್ಲ, ಜಾಗವನ್ನು ಅತಿಕ್ರಮಿಸಿಕೊಂಡಿದ್ದೀರಿ, ಕಟ್ಟಡ ನಿರ್ಮಿಸಲು ಲೈಸೆನ್ಸ್ ಪಡೆದಿಲ್ಲ, ಶಿಕ್ಷಣ ಸಂಸ್ಥೆಗಳಿಗೆ ನೀಡುವ ಶಾಲೆ ನಡೆಸಲು ಅನುಮತಿ ಪಡೆದಿಲ್ಲ, ಮಕ್ಕಳ ಸಂಖ್ಯೆ ಹೆಚ್ಚಾಗಿದೆ, ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಹೊಂದಿಲ್ಲ, ದಾಖಲಾತಿಗಿಂತ ಹೆಚ್ಚು ಮಕ್ಕಳನ್ನು ತೋರಿಸಿ, ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ಬೆದರಿಸುವುದು ಎಗ್ಗಿಲ್ಲದೇ ನಡೆದಿದೆ ಎಂದು ಆರೋಪಿಸಿದರು.

ಅಕ್ರಮ ಹಣ ವಸೂಲಿಗೆ ಇಳಿದಿರುವ ತಪ್ಪಿತಸ್ಥ ಆರ್‌ಟಿಐ ಕಾರ್ಯಕರ್ತರು, ಇಂತಹ ಕೃತ್ಯಗಳಿಗೆ ಮಾರ್ಗದರ್ಶನ ನೀಡಿ ಬೆಂಬಲಿಸುತ್ತಿರುವ ನೌಕರರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ತಪ್ಪಿತಸ್ಥ ನೌಕರರು, ಆರ್‌ಟಿಐ ಕಾರ್ಯಕರ್ತರ ಮೊಬೈಲ್ ಸಂಭಾಷಣೆ, ವಾಟ್ಸಪ್‌, ಎಸ್‌ಎಂಎಸ್‌ ಸಂದೇಶಗಳು, ನೆಟ್‌ವರ್ಕ್‌ ಹೀಗೆ ಎಲ್ಲದನ್ನೂ ಪರಿಶೀಲಿಸಿದರೆ ದುರುಳರು ಪತ್ತೆಯಾಗಬಲ್ಲದು ಎಂದು ಡಿಸಿ ಗಂಗಾಧರ ಸ್ವಾಮಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ ಇತರರು ಇದ್ದರು.

- - - -26ಕೆಡಿವಿಜಿ44.ಜೆಪಿಜಿ:

ದಾವಣಗೆರೆಯಲ್ಲಿ ಹಣ ವಸೂಲಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಸ್ಸಲ್ಲಿಸಲಾಯಿತು.

Share this article