ವೈದ್ಯರು ಸುಧಾರಿತ ಚಿಕಿತ್ಸಾ ಪ್ರಯೋಗ ಬಳಕೆಗೆ ಮುಂದಾಗಲಿ

KannadaprabhaNewsNetwork |  
Published : Jul 06, 2024, 12:48 AM IST
ತುಮಕೂರಿನ ಶ್ರೀ ಸಿದ್ಧಾರ್ಥ ದಂತ ಕಾಲೇಜಿನಲ್ಲಿ ಬಾಯಿ ಮತ್ತು ಅದರ ವ್ಯವಸ್ಥಿತ ಆರೋಗ್ಯ’ ವಿಷಯ ಕುರಿತ  ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಬಾಯಿಯ ರೋಗಗಳು, ಸಕ್ಕರೆ ಸೇವನೆ, ತಂಬಾಕು ಬಳಕೆ, ಮದ್ಯಪಾನ ಮತ್ತು ಕಳಪೆ ನೈರ್ಮಲ್ಯ, ಮತ್ತು ಅವುಗಳ ಆಧಾರವಾಗಿರುವ ಅನೇಕ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮನುಷ್ಯನ ಜೀವನ ಕ್ರಮವನ್ನು ಬದಲಾಯಿಸುತ್ತಿವೆ. ಇಂತಹ ರೋಗಗಳಿಗೆ ವೈದ್ಯರು ಸುಧಾರಿತ ರೀತಿಯ ಚಿಕಿತ್ಸಾ ಪ್ರಯೋಗಗಳಿಗೆ ಮುಂದಾಗಬೇಕಿದೆ

ಕನ್ನಡಪ್ರಭ ವಾರ್ತೆ ತುಮಕೂರು

ಬಾಯಿಯ ರೋಗಗಳು, ಸಕ್ಕರೆ ಸೇವನೆ, ತಂಬಾಕು ಬಳಕೆ, ಮದ್ಯಪಾನ ಮತ್ತು ಕಳಪೆ ನೈರ್ಮಲ್ಯ, ಮತ್ತು ಅವುಗಳ ಆಧಾರವಾಗಿರುವ ಅನೇಕ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮನುಷ್ಯನ ಜೀವನ ಕ್ರಮವನ್ನು ಬದಲಾಯಿಸುತ್ತಿವೆ. ಇಂತಹ ರೋಗಗಳಿಗೆ ವೈದ್ಯರು ಸುಧಾರಿತ ರೀತಿಯ ಚಿಕಿತ್ಸಾ ಪ್ರಯೋಗಗಳಿಗೆ ಮುಂದಾಗಬೇಕಿದೆ ಎಂದು ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಹೇಳಿದರು.

ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ದಂತ ಕಾಲೇಜು ಮತ್ತು ಆಸ್ಪತ್ರೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಆಶ್ರಯದಲ್ಲಿ ದಿ. ಡಾ..ಬಿ.ಕೆ.ವೆಂಕಟರಾಮನ್ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಬಾಯಿ ಮತ್ತು ಅದರ ವ್ಯವಸ್ಥಿತ ಆರೋಗ್ಯ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಬಾಯಿ ರೋಗಗಳು, ತಂಬಾಕು ಬಳಕೆ ಮತ್ತು ಅವುಗಳ ಆಧಾರವಾಗಿರುವ ಅನೇಕ ಕಾಯಿಲೆಗಳಿಗೆ ಜಾಗೃತಿ ಮೂಡಿಸುವ ಜೊತೆಗೆ ಸುಧಾರಿತ ತಂತ್ರಜ್ಞಾನ ಬಳಕೆ ಕುರಿತ ವಿಚಾರ ಸಂಕಿರಣದಲ್ಲಿ ತಿಳಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ನಾರಾಯಣ ಹೃದಯಾಲಯದ ಶೈಕ್ಷಣಿಕ ನಿರ್ದೇಕ ಡಾ.ಬಿ.ವಿ.ಮುರಳಿಮೋಹನ್ ಮಾತನಾಡಿ, ತಂಬಾಕು, ಮದ್ಯಪಾನ ಮತ್ತು ಅಡಿಕೆ ಬಳಕೆ ಯುವಜನರಲ್ಲಿ ಹೆಚ್ಚುತ್ತಿರುವ ಶೇಕಡಾವಾರು ಬಾಯಿಯ ಕ್ಯಾನ್ಸರ್‌ಗೆ ಪ್ರಚೋದನೆ ನೀಡುತ್ತವೆ. ಇದರ ಪರಿಣಾಗಳನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನದ ಆರೋಗ್ಯ ಸುಧಾರಣಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.ಹೆಚ್ಚಿನ ಮೌಖಿಕ ಆರೋಗ್ಯ ಪರಿಸ್ಥಿತಿಗಳನ್ನು ತಡೆಗಟ್ಟಬೇಕಾದರೆ, ಅವುಗಳ ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ನೀಡಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಹಲ್ಲಿನ ಕ್ಷಯ, ಬಾಯಿಯ ಕ್ಯಾನ್ಸರ್, ಪರಿದಂತದ ಕಾಯಿಲೆಗಳು, ಹಲ್ಲಿನ ನಷ್ಟ ಮತ್ತು ಬಾಯಿಯ ಕ್ಯಾನ್ಸರ್, ಓರೊಫೇಶಿಯಲ್ ಸೀಳುಗಳು, ಬಾಯಿಯಲ್ಲಿ ಪ್ರಾರಂಭವಾಗುವ ತೀವ್ರ ಗ್ಯಾಂಗ್ರೀನಸ್ ಕಾಯಿಲೆ ಮತ್ತು ಓರೊ-ಡೆಂಟಲ್ ರೋಗಗಳು ಜನಸಾಮನ್ಯರನ್ನು ಹೈರಾಣು ಮಾಡುತ್ತವೆ. ಇಂತಹ ರೋಗಗಳ ಬಗ್ಗೆ ಸಾಮನ್ಯ ಜನರಲ್ಲಿ ಅರಿವನ್ನು ಉಂಟು ಮಾಡಬೆಕು ಎಂದು ಹೇಳಿದರು.

ಬೆಳೆಯುತ್ತಿರುವ ನಗರೀಕರಣ ಮತ್ತು ಜೀವನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳೊಂದಿಗೆ ಬಾಯಿಯ ಕಾಯಿಲೆಗಳ ಹರಡುವಿಕೆಯು ಜಾಗತಿಕವಾಗಿ ಹೆಚ್ಚುತ್ತಲೇ ಇದೆ. ನೀರಿನ ಪೂರೈಕೆಯಲ್ಲಿ ದೋಷಗಳು, ಟೂತ್‌ಪೇಸ್ಟ್‌ನಲ್ಲಿಯ ರಾಸಾಯನಿಕಗಳ ವ್ಯತ್ಯಾಸ, ಅಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ, ಸಕ್ಕರೆಯಲ್ಲಿ ಅಧಿಕವಾಗಿರುವ ಆಹಾರ ಮತ್ತು ಪಾನೀಯ, ತಂಬಾಕು ಮತ್ತು ಆಲ್ಕೋಹಾಲ್‌ನಂತಹ ಉತ್ಪನ್ನಗಳ ಮಿತಿಮೀರಿದ ಬಳಕೆಯಿಂದ ದಂತರೋಗಗಳು ಹೆಚ್ಚಾಗುತ್ತವೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಬೆಕು ಎಂದು ಡಾ.ಬಿ.ವಿ.ಮುರಳಿಮೋಹನ್ ಸಲಹೆ ನೀಡಿದರು.

ವೈದ್ಯರಾದ ಡಾ.ಸುರೇಶ್, ಡಾ.ಸಂದೀಪ್ ಬಿ.ಆರ್., ಡಾ.ವಿನಯ್ ಅವರು ಪ್ರತ್ಯೇಕ ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿ, ಬಾಯಿಯ ಕಾಯಿಲೆಗಳ ಮತ್ತು ಅವುಗಳ ಪರಿಹಾರ ಮಾರ್ಗೋಪಾಯಗಳ ಕುರಿತು ವೈದ್ಯರೊಂದಿಗೆ ಸಂವಾದ ನಡೆಸಿದರು.

ಪ್ರಾಂಶುಪಾಲ ಡಾ.ಬಿ. ಪ್ರವೀಣ್ ಕುಡುವ, ಡಾ.ಭರತೀಶ್, ಕುಲಸಚಿವ ಡಾ.ಎಂ.ಝೆಡ್.ಕುರಿಯನ್, ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಡಾ.ದಿವಾಕರ್, ಡಾ.ಅರುಣಾ, ಡಾ.ಗುರುಶಂಕರ್ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ