ಕನ್ನಡಪ್ರಭ ವಾರ್ತೆ ಹಾಸನ
ಸಕಲೇಶಪುರ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಅರ್ಜುನ ಆನೆ ಸಮಾಧಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದೇ ಮೀರಿ ಉದ್ಘಾಟನೆ ಮಾಡಲು ಮುಂದಾದರೆ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮೂಲಭೂತ ಸೌಕರ್ಯ ಕೊಡದೇ ಅರ್ಜುನ ಸಮಾಧಿ ಉದ್ಘಾಟನೆ ಮಾಡುವುದು ಬೇಡ ಎನ್ನುವುದು ನನ್ನ ಅಭಿಪ್ರಾಯ. ಏನಾದರೂ ಮೀರಿ ಉದ್ಘಾಟನೆ ಮಾಡಲು ಮುಂದಾದರೇ ಖಂಡಿತವಾಗಲೂ ಪ್ರತಿಭಟನೆ ಮಾಡಬೇಕಾಗುತ್ತದೆ. ಕನಿಷ್ಠ ಮೂಲಭೂತ ಸೌಕರ್ಯಗಳಾದ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಇಂಟರ್‌ಲಾಕ್, ಜೊತೆಗೆ ಹೋಗಿ ಬರಲು ಸರಿಯಾದ ರಸ್ತೆ ಇರುವುದಿಲ್ಲ. ನಾವು ಅಭಿವೃದ್ಧಿಗೆ ಕೇಳಿರುವುದು ೫ ಕೋಟಿ, ಅವರು ಕೊಡ್ತೀನಿ ಎಂದಿರುವುದು ೫೦ ಲಕ್ಷ. ಭೂಮಿ ಪೂಜೆ ಮಾಡಬೇಕಾದರೇ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಕೇವಲ ೧೪ ಲಕ್ಷ ರು.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಜುನ ಸ್ಮಾರಕ ಮಾಡಲು ಮೂರರಿಂದ ನಾಲ್ಕು ಲಕ್ಷ ರು. ಮಾತ್ರ ವಿನಿಯೋಗಿಸಲಾಗಿದೆ. ಅರ್ಜುನ ಆನೆಗೆ ಕೊಡುವ ಗೌರವ ಇಷ್ಟೆನಾ ಎಂಬುದು ನಮ್ಮ ಪ್ರಶ್ನೆ. ಈ ಬಗ್ಗೆ ಸಚಿವರಲ್ಲೂ ಕೂಡ ಮೊಬೈಲ್ ಮೂಲಕ ಕರೆ ಮಾಡಿದಾಗ ಉದ್ಘಾಟನೆ ಮುಂದೂಡುವುದಾಗಿ ಹೇಳಿದ್ದಾರೆ. ಈ ಸ್ಮಾರಕ ಉದ್ಘಾಟನೆ ಮಾಡಿದರೇ ಅದು ಪ್ರವಾಸೋದ್ಯಮ ಸ್ಥಳ ಮಾಡಲು ಸಾಧ್ಯವಿದೆಯಾ ಎಂದರು. ಇರುವುದೊಂದು ಕುಗ್ರಾಮದ ಕಾಡಿನಲ್ಲಿದೆ. ಹೋಗಿ ಬರುವ ರಸ್ತೆಯೇ ಇಲ್ಲ. ಸ್ವಲ್ಪ ದಿನದಲ್ಲಿ ಮಳೆ ಶುರುವಾಗುತ್ತದೆ. ಅಲ್ಲಿಗೆ ಯಾರು ಹೋಗಿ ಬರುತ್ತಾರೆ. ಈ ವೇಳೆ ಆನೆ ದಾಳಿ ಮಾಡಿದರೇ ಅವರಿಗೆ ಸುರಕ್ಷತೆ ಕೊಡುವವರು ಯಾರು, ಇದು ಯಾರ ಜವಾಬ್ದಾರಿ ಎಂದು ಪ್ರಶ್ನಿಸಿದರು.ಅರ್ಜುನ ಆನೆ ಜೊತೆ ಕರ್ನಾಟಕ ಜನತೆಗೆ ಭಾವನಾತ್ಮಕ ಸಂಬಂಧವಿದೆ. ೮ ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಕೊಡುವ ಗೌರವ ಇಷ್ಟೇನಾ ಎಂಬುದು ಕೇಳುತ್ತಿದ್ದೇನೆ. ಅದು ವಯಸ್ಸಾಗಿ ಸತ್ತಿಲ್ಲ. ಕಾಡಾನೆ ಕಾರ್ಯಾಚರಣೆ ಮಾಡುವ ವೇಳೆ ಹೋರಾಟ ಮಾಡಿ ವೀರಮರಣ ಹೊಂದಿರುವುದುಕ್ಕೆ ಇವರು ಕೊಡುವ ಗೌರವ ಇಷ್ಟೇನಾ ಎಂಬುದನ್ನು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತೇನೆ. ಖಂಡಿತವಾಗಿಯೂ ಕೂಡ ಆ ರಿತಿ ಉದ್ಘಾಟನೆ ಮಾಡುವುದು ಬೇಡ ಎಂದಿದ್ದೇನೆ. ಮೀರಿ ಮುಂದಾದರೇ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಅರಣ್ಯ ಇಲಾಖೆಯವರದು ಬೇಜವಾಬ್ದಾರಿ ನಡವಳಿಕೆ. ಈ ಪ್ರಜಾಪ್ರಭುತ್ವದಲ್ಲಿ ಜನಪ್ರನಿಧಿಗಳಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವ ಆರ್.ಎಫ್. ಗೆ ಒಬ್ಬ ಶಾಸಕ ಎನ್ನುವ ಗೌರವ ಇಲ್ಲ. ಕಾರ್ಯಕ್ರಮವೊಂದಕ್ಕೆ ಕರೆದಿರುವುದನ್ನು ಸುಳ್ಳು ಹೇಳುತ್ತಾರೆ. ಮೊನ್ನೆ ಶಾಸಕ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಕರೆದು ನನ್ನನ್ನು ಎರಡೂವರೆ ಗಂಟೆಗಳ ಕಾಲ ರಸ್ತೆ ಮೇಲೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಈ ರೀತಿ ಏಕೆ ಅರಣ್ಯ ಇಲಾಖೆಯು ಹಾಸನದಲ್ಲಿ ನಡೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ನಮ್ಮ ಜನ ಸ್ವಾಭಿಮಾನಿ ಜನರಾಗಿದ್ದು, ಅರ್ಜುನ್ ಆನೆ ಸಮಾಧಿ ಬಳಿ ಮೂಲಬೂತ ಸೌಕರ್ಯ ಕಲ್ಪಿಸದೇ ಇದ್ದರೇ ನಾವೆಲ್ಲಾ ಸೇರಿ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿ.ಎಚ್. ನಾರಾಯಣಗೌಡ, ಪ್ರಸನ್ನ ಕುಮಾರ್, ಇತರರು ಉಪಸ್ಥಿತರಿದ್ದರು.