ಗಂಗಾವತಿ: ರೈತರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ನೂತನ ತಂತ್ರಜ್ಞಾನಗಳ ಮಾಹಿತಿ ಪಡೆಯಬೇಕೆಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಸಲಹಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ವಿಜ್ಞಾನ ಕೇಂದ್ರಗಳು ಪ್ರತಿ ವರ್ಷಕ್ಕೊಮ್ಮೆ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಸುವ ಅವಶ್ಯಕತೆ ಇದೆ. ಕಳೆದ ವರ್ಷದ ಪುನರಾವಲೋಕನ, ಕ್ರಿಯಾ ಯೋಜನೆ ಮತ್ತು ಸಲಹಾ ಸಮಿತಿ ಕೊಟ್ಟಿರುವ ಸೂಚನೆಗಳನ್ನು ಅಳವಡಿಸಿಕೊಂಡಿರುವುದರ ಬಗ್ಗೆ ಮಾಹಿತಿ ನೀಡಬೇಕು. ರೈತರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ನೂತನ ತಂತ್ರಜ್ಞಾನಗಳ ಮಾಹಿತಿ ಪಡೆಯಬೇಕು. ವಿಜ್ಞಾನಿಗಳು ರೈತರ ಮತ್ತು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯತೆ ಇದೆ. ಕೃಷಿ ಆಧಾರಿತ ಸಮಸ್ಯೆಗಳನ್ನು ರೂಪಿಸಿ ಅದಕ್ಕೆ ತಕ್ಕ ಪರಿಹಾರಗಳನ್ನು ರೈತರ ಕ್ಷೇತ್ರಗಳಲ್ಲಿ ಅಳವಡಿಸಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಸಂಪನ್ಮೂಲಗಳ ಸದ್ಬಳಕೆಯಾಗುವುದರ ಜೊತೆಗೆ ವಿವಿಧ ಘಟಕಗಳಿಂದ ಆಗುವ ಆರ್ಥಿಕ ಆದಾಯದ ಅನುಕೂಲಗಳ ಕುರಿತು ರೈತರಿಗೆ ಮನದಟ್ಟು ಮಾಡಬೇಕು. ಮಾರುಕಟ್ಟೆ ಆಧಾರಿತ ವಿಸ್ತರಣಾ ಕಾರ್ಯಕ್ರಮಗಳಿಗೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ ಬಿ. ಹಂಜಿ, ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ ಎಲಿಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಭೆಯಲ್ಲಿ ಡಾ. ಎಸ್.ಎಲ್. ಪಾಟೀಲ, ಡಾ.ಎಸ್.ಬಿ.ಗೌಡಪ್ಪ, ಡಾ. ಬಿ.ಕೆ. ರಾವ್, ಡಾ. ಜೆ. ವಿಶ್ವನಾಥ; ಡಾ. ಎ.ಆರ್.ಕುರುಬರ್ ಸಲಹೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಪ್ರಗತಿಪರ ರೈತರಾದ ಗವಿಸಿದ್ಧಪ್ಪ, ಕೃಷ್ಣ ಕುಲಕರ್ಣಿ, ಅನಿಲ್‌ಕುಮಾರ, ವೀರನಗೌಡ ಕುಲಕರ್ಣಿ, ಶ್ರೀನಿವಾಸ ರೆಡ್ಡಿ, ಗಾದಿಲಿಂಗಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಳಗಿ, ಡಾ.ಎಂ.ವಿ.ರವಿ, ಭತ್ತದ ತಳಿವಿಜ್ಞಾನಿ ಡಾ.ಮಹಾಂತ ಶಿವಯೋಗಯ್ಯ, ಪಶುವಿಜ್ಞಾನಿ ಡಾ.ಎಂ.ಟಿ. ಮಹಾಂತೇಶ್, ಕೃಷಿ ವಿಜ್ಞಾನ ಕೇಂದ್ರದ ಗೃಹವಿಜ್ಞಾನಿ ಡಾ.ಕವಿತಾ ಉಳ್ಳಿಕಾಶಿ, ತೋಟಗಾರಿಕಾ ವಿಜ್ಞಾನಿ ಡಾ.ಜ್ಯೋತಿ ಆರ್., ಬೀಜ ವಿಜ್ಞಾನಿ ಜೆ.ರಾಧಾ, ಹಿರಿಯ ತಾಂತ್ರಿಕ ಅಧಿಕಾರಿ ಜಿ.ನಾರಪ್ಪ ಉಪಸ್ಥಿತರಿದ್ದರು.ಡಾ.ಕವಿತಾ ಉಳ್ಳಿಕಾಶಿ ನಿರೂಪಿಸಿದರು.