ಹೊಸಪೇಟೆ: ಸಂಶೋಧನಾರ್ಥಿಗಳು ನಡೆಸುವ ಸಂಶೋಧನೆಗಳು ಕೇವಲ ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೆ, ಅವು ಜನಸಾಮಾನ್ಯರಿಗೆ ಮುಟ್ಟಬೇಕು. ಪ್ರಮುಖವಾಗಿ ಪಿಎಚ್‌ಡಿ ಮಹಾಪ್ರಬಂಧಗಳು ಸಾರ್ವಜನಿಕರ ಸ್ವತ್ತು ಎಂದು ಶಾಸಕ ಎಚ್. ಆರ್. ಗವಿಯಪ್ಪ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಸೌಲಭ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಎಂ.ಪಿ. ಪ್ರಕಾಶ್ ಸೇರಿದಂತೆ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಪ್ರಮುಖವಾಗಿ ಎಂ.ಪಿ. ಪ್ರಕಾಶ್ ಅವರು ಕನ್ನಡ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಹಾಗೂ ಜಾನಪದ ಆಸಕ್ತಿಯ ಅಂಶಗಳೊಂದಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಬಹಳ ವಿಶಿಷ್ಟವಾಗಿ ಆರಂಭಿಸಲು ಕಾರಣೀಭೂತರಾಗಿದ್ದಾರೆ. ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಶೋಧನೆಗಳು ಇನ್ನು ಮುಂದೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು. ಹಾಗಾದರೆ ಮಾತ್ರ ವಿದ್ಯಾರ್ಥಿ ಹಾಗೂ ಸಮುದಾಯಗಳಿಗೆ ಅನುಕೂಲವಾಗುತ್ತದೆ ಎಂದರು.ವಿಜಯನಗರ ಕ್ಷೇತ್ರವು ಪ್ರವಾಸಿ ತಾಣವಾಗಿರುವುದರಿಂದ ಪ್ರತಿನಿತ್ಯ ಐದರಿಂದ ಹತ್ತು ಸಾವಿರ ಪ್ರವಾಸಿಗರು ಬಂದೇ ಬರುತ್ತಾರೆ. ಕನ್ನಡ ವಿಶ್ವವಿದ್ಯಾಲಯ ನಾಡಿನ ಅಸ್ಮಿತೆಗಾಗಿ ನಡೆಸುತ್ತಿರುವ ಸಂಶೋಧನೆಗಳು ಪ್ರವಾಸಿಗರಿಗೆ ಲಭ್ಯವಾಗುವ ರೀತಿಯಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ನನಗೆ ಕನ್ನಡ ವಿಶ್ವವಿದ್ಯಾಲಯದ ಅಡಿಗಲ್ಲಿನಿಂದ ಇಲ್ಲಿಯವರೆಗೆ ೩೩ ವರ್ಷಗಳ ಅವಿನಾಭಾವ ಸಂಬಂಧವಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿರುವ ಅಕ್ಷರ ಗ್ರಂಥಾಲಯವನ್ನು ಹೆಚ್ಚೆಚ್ಚು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಜತೆ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿ, ನಂತರ ಮಾತನಾಡಿದ ಅವರು, ನಮ್ಮ ಸರ್ಕಾರ ಜನಪರವಾಗಿದ್ದು, ಪ್ರತಿ ವಾರ ಸಂಪುಟ ಸಭೆಯನ್ನು ನಡೆಸಿ ರಾಜ್ಯದಲ್ಲಿರುವ ಸಮಸ್ಯೆಗಳನ್ನು ಖುದ್ದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳು ಅವುಗಳನ್ನು ಸೂಕ್ತವಾಗಿ ಪರಿಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಸದ್ಯದಲ್ಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಾಸೆಗೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲ್ಯ ಆಧರಿತ ಶಿಕ್ಷಣವನ್ನು ಪಡೆದುಕೊಂಡು ಪಠ್ಯಕ್ರಮದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದರು.ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯಕ್ಕೆ ವಿಜಯನಗರ ಜಿಲ್ಲಾಡಳಿತವು ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ₹೫ ಲಕ್ಷ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಿ ಅನುಕೂಲ ಮಾಡಿಕೊಟ್ಟಿದ್ದು, ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯವು ಸ್ಥಾಪನೆಗೊಂಡು ೩೩ ವರ್ಷಗಳ ವಸಂತದಲ್ಲಿದೆ. ಇದರ ಬೆಳವಣಿಗೆಗೆ ಸ್ಥಳೀಯ ರಾಜಕಾರಣಿಗಳು, ಚಿಂತಕರು, ಸಾಮಾಜಿಕ ಹೋರಾಟಗಾರರು ಹಾಗೂ ಜನಸಾಮಾನ್ಯರ ಕೊಡುಗೆ ಮಹತ್ವವಾದದ್ದು. ಕನ್ನಡ ವಿಶ್ವವಿದ್ಯಾಲಯವನ್ನು ಎಲ್ಲ ಕುಲಪತಿಗಳು, ಕುಲಸಚಿವರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಕಟ್ಟಿ ಬೆಳೆಸಿದ್ದಾರೆ. ಇನ್ನು ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸೌಲಭ್ಯದ ಕೊರತೆ ಕಾಣುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಸೌಲಭ್ಯವನ್ನು ಒದಗಿಸಬೇಕಾಗಿದೆ ಎಂದರು.ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್. ನಂಜಯ್ಯನವರ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು ಪ್ರಾಧ್ಯಾಪಕರು ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕ ಡಾ. ಎಂ.ಸಿ. ಗುಡಿಮನಿ ನಿರೂಪಿಸಿದರು.