ಕುಮಟಾ: ಕರಾವಳಿಯಲ್ಲಿ ಪ್ರಾಮಾಣಿಕಾಗಿ ದುಡಿದು ಬದುಕುತ್ತಿರುವ ಮೀನುಗಾರ ಸಮಾಜ ಶೈಕ್ಷಣಿಕವಾಗಿ ಇನ್ನೂ ಉನ್ನತಿ ಬರಬೇಕಿದೆ. ಮೀನುಗಾರ ಸಮಾಜ ಸಮಗ್ರವಾಗಿ ಪ್ರಗತಿ ಸಾಧಿಸಬೇಕಾದರೆ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಎಲ್ಲ ರೀತಿಯಿಂದ ಅವರನ್ನು ಮೇಲೆ ತರಬೇಕಿದೆ. ಹೀಗಾದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೀನುಗಾರ ಸಮಾಜ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಪಟ್ಟಣದ ಖಾಸಗಿ ಹೋಟೆಲ್ ಸಭಾಭವನದಲ್ಲಿ ಶುಕ್ರವಾರ ಮೀನುಗಾರಿಕೆ ಇಲಾಖೆಯಡಿ ಮುತ್ತು ಕೃಷಿ ಮತ್ತು ನೀಲಿ ಕಲಗ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಫಲಾನುಭವಿಗಳಿಗೆ ಮಂಜೂರಾದ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ೫೦ ಮತ್ಸ್ಯಾಶ್ರಯ ಮನೆ ಮಂಜೂರಿಯಾಗಿತ್ತು. ಇನ್ನೂ ತನಕ ಅರ್ಹರನ್ನು ಹುಡುಕಿ ಆಯ್ಕೆ ಮಾಡುವ ಕೆಲಸವಾಗಿಲ್ಲದಿರುವುದು ಬೇಸರದ ಸಂಗತಿ. ಮೀನುಗಾರರಿಗೆ ಸಂಬಂಧಿಸಿದ ಯೋಜನೆಗಳು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ತ್ವರಿಗತಿಯಲ್ಲಿ ಅಧಿಕಾರಿಗಳಿಂದ ಆಗಬೇಕಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಬಹುಮುಖಿ ಕೃಷಿ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರವು ವಿವಿಧ ನವೀನ ವಿಧಾನಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ನಿಟ್ಟಿನಲ್ಲಿ ಮುತ್ತು ಹಾಗೂ ನೀಲಿ ಕಲಗದ ಕೃಷಿಯು ಸ್ಥಳೀಯ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಲಿದೆ. ಈ ತರಬೇತಿ ಕಾರ್ಯಾಗಾರವು ಹೊಸ ಬಗೆಯ ಕೃಷಿ ವಿಧಾನವನ್ನು ಕಲಿಸುವ ಜತೆಗೆ ಸ್ವಾವಲಂಬಿ ಬದುಕಿಗೆ ದಾರಿಯಾಗಲಿ ಎಂದರು.ದಕ್ಷಿಣ ಕನ್ನಡ ಮೀನುಗಾರಿಕೆ ಮಾರಾಟ ಮಂಡಳಿ ಅಧ್ಯಕ್ಷೆ ದರ್ಶಿನಿ, ಭಟ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕ ರೇಣುಕಾ ಸ್ವಾಮಿ, ಕುಮಟಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್ ಆರ್ ಪುತ್ರನ್ ಇತರರು ಇದ್ದರು.ಮೀನುಗಾರಿಕೆ ಸಂದರ್ಭದಲ್ಲಿ ಬಳಸುವ ಸುರಕ್ಷತಾ ಸಾಧನ ಸಲಕರಣಗಳನ್ನು ವಿತರಿಸಲಾಯಿತು. ೨೦೨೨- ೨೩ನೇ ಸಾಲಿನಲ್ಲಿ ಮಂಜೂರಾಗಿದ್ದ ೨೩ ಮತ್ಸ್ಯಾಶ್ರಯ ಮನೆಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮುತ್ತು ಕೃಷಿಯ ಜತೆಗೆ ನೀಲಿ ಕಲಗದ ಕೃಷಿಯ ಕುರಿತು ಮಾಹಿತಿ ನೀಡಿದರು.ಇಂದು ಗೋಲ್ ಶಾಲೆಯ ವಾರ್ಷಿಕೋತ್ಸವ
ಹೊನ್ನಾವರ: ತಾಲೂಕಿನ ಮಂಕಿಯ ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ೮ನೇ ವಾರ್ಷಿಕೋತ್ಸವ ಈ ಸಲ ಮಹತ್ವಾಕಾಂಕ್ಷಿ ನಾಯಕರಿಗೆ ಜಾಗತಿಕ ಅವಕಾಶಗಳು ಎಂಬ ಧ್ಯೇಯ ವಾಕ್ಯದಡಿ ಫೆ. 1ರ ಸಂಜೆ ೫.೩೦ಕ್ಕೆ ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯೆ ಸವಿತಾ ಪವಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಶಾಲೆ ಪ್ರತಿವರ್ಷ ಒಂದೊಂದು ಧ್ಯೇಯ ವಾಕ್ಯದೊಡನೆ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುತ್ತ ಬಂದಿದೆ. ಶಾಲೆ ಪ್ರಾರಂಭವಾದ ೮ ವರ್ಷಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಭಾಗವಹಿಸಿರುತ್ತಾರೆ. ಶಾಲೆ ತನ್ನ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಅತಿಥಿಯಾಗಿ ಪತ್ರಕರ್ತ ಮತ್ತು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಹೊನ್ನಾವರ ಬಿಇಒ ಜಿ.ಎಸ್. ನಾಯ್ಕ ಪಾಲ್ಗೊಳ್ಳುವರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ಆರ್. ನಾಯಕ ಅಧ್ಯಕ್ಷತೆ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಶಾಲೆಯ ಶಿಕ್ಷಕಿ ಬೇಬಿ ಬೆಂಜಾಮಿನ್ ಉಪಸ್ಥಿತರಿದ್ದರು.