ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಗೊಂದಲ ನಿವಾರಿಸಲಿ

KannadaprabhaNewsNetwork |  
Published : Dec 06, 2024, 08:58 AM IST
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸುರೇಶಗೌಡ ಮಾತನಾಡಿದರುು | Kannada Prabha

ಸಾರಾಂಶ

ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಡಿ.7 ಮತ್ತು 8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿವೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಡಿ.7 ಮತ್ತು 8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿವೆ.ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರದಲ್ಲಿ ಉಂಟಾಗಿರುವ ಹೇಮಾವತಿ ನೀರಿನ ಗೊಂದಲವನ್ನು ಸರ್ಕಾರ ನಿವಾರಣೆ ಮಾಡಬೇಕು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೆವು ಎಂದರು.ಹಲವು ಮುಖಂಡರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಬಂದಿದೆ. ಎಕ್ಸ್‌ಪ್ರೆಸ್‌ ಕೆನಾಲ್ ಮೂಲಕ ಈ ನೀರನ್ನು ಕಸಿಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹೋರಾಟ ನಿಲ್ಲುವುದಿಲ್ಲ. ಹೋರಾಟದಲ್ಲಿ ಪ್ರಾಣಹಾನಿ, ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದರು.ಯೋಜನೆಯಲ್ಲಿ ಲಭ್ಯವಿರುವ ಪ್ರಮಾಣದ ನೀರು ಕುಣಿಗಲ್‌ಗೆ ಹರಿಯುತ್ತಿದೆ. ಆದರೆ ದೊಡ್ಡ ಪೈಪ್‌ಗಳನ್ನು ಅಳವಡಿಸಿ ಇಲ್ಲಿಂದ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಯೋಜನೆ ಜಿಲ್ಲೆಯ ಜನರಿಗೆ, ರೈತರಿಗೆ ಮರಣ ಶಾಸನವಾಗಲಿದೆ. ನಮ್ಮ ನೀರಿನ ಹಕ್ಕನ್ನು ಕಸಿಯುವ ಈ ಯೋಜನೆಗೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ ಎಂದರು.ಬಿಜೆಪಿ ಹಾಗೂ ಜೆಡಿಎಸ್ ಮುಂದಾಳತ್ವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ರೈತರೊಂದಿಗೆ ಡಿ.7 ರಂದು ಬೆಳಿಗ್ಗೆ 10.30ಕ್ಕೆ ಗುಬ್ಬಿ ತಾಲೂಕು ಸಾಗರನಹಳ್ಳಿ ಬಳಿಯ ಹೇಮಾವತಿ ನಾಲೆ ಗೇಟ್ ಬಳಿಯಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.7ರಂದು ಮಧ್ಯಾಹ್ನ ಗುಬ್ಬಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಪಾದಯಾತ್ರೆ ಮುಂದುವರಿಸಿ, ಕಳ್ಳಿಪಾಳ್ಯದ ಗೇಟ್ ಬಳಿಯ ಓಂ ಪ್ಯಾಲೇಸ್ ಭವನದಲ್ಲಿ ಪಾದಯಾತ್ರಿಗಳು ರಾತ್ರಿ ತಂಗಿ ಮಾರನೆ ದಿನ ಯಾತ್ರೆ ಮುಂದುವರೆಸುವರು. ಡಿ.೮ರಂದು ಸಂಜೆ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ತಲುಪಿ ಸೋಮವಾರದಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೆಬ್ಬಾಕ ರವಿಶಂಕರ್ ಹೇಳಿದರು.ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ಸಾಗರನಹಳ್ಳಿ ವಿಜಯಕುಮಾರ್, ಗಂಗರಾಜು, ಜೆಡಿಎಸ್ ಮುಖಂಡರಾದ ಗುಬ್ಬಿ ನಾಗರಾಜು, ಯೋಗಾನಂದ್, ವಿಜಯ್‌ಕುಮಾರ್, ಮುಖಂಡರಾದ ಚಂದ್ರಶೇಖರಬಾಬು, ಟಿ.ಆರ್.ಸದಾಶಿವಯ್ಯ, ಪಂಚಾಕ್ಷರಯ್ಯ, ಜೆ.ಜಗದೀಶ್, ನಿಟ್ಟೂರು ಪ್ರಕಾಶ್ ಮೊದಲಾದವರು ಹಾಜರಿದ್ದರು.

ತೊಡೆ ತಟ್ಟಿದರೆ ತೊಡೆ ಮುರಿದುಕೊಂಡ ದುರ್ಯೋಧನನಂತಾಗಬೇಕಾಗುತ್ತದೆ: ಹೈಕಮಾಂಡ್‌ಗೇ ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಇರುವ ಡಿ.ಕೆ.ಶಿವಕುಮಾರ್ ಅವರು ಹೇಮಾವತಿ ಡ್ಯಾಂನಿಂದಲೇ ನೇರವಾಗಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲಿ, ಜಿಲ್ಲೆಯ ಪಾಲಿನ ನೀರು ಕೊಡುವುದಿಲ್ಲ. ನೀರನ್ನು ತೆಗೆದುಕೊಂಡೇ ಹೋಗುತ್ತೇವೆ ಎಂದು ತೊಡೆ ತಟ್ಟಿದರೆ, ಇಲ್ಲಿನ ರೈತರೂ ತೊಡೆ ತಟ್ಟಿ ನಿಲ್ಲುತ್ತಾರೆ. ಆಮೇಲೆ ನಿಮ್ಮ ಪರಿಸ್ಥಿತಿ ತೊಡೆ ಮುರಿದುಕೊಂಡ ದುರ್ಯೋಧನನಂತಾಗುತ್ತದೆ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.ಕೆನಾಲ್‌ ಬಗ್ಗೆ ಅಧಿವೇಶನದಲ್ಲೂ ಹೋರಾಟ!: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ನಿಂದ ಜಿಲ್ಲೆಯ ಕುಡಿಯುವ ನೀರಿಗೆ ದೊಡ್ಡಮಟ್ಟದ ತೊಂದರೆಯಾಗುತ್ತದೆ. ನೀರು ತೆಗೆದುಕೊಂಡು ಹೋಗಲು ಭಾರಿ ಗಾತ್ರದ ಪೈಪ್‌ಗಳನ್ನು ಬಳಸಿದರೆ ನಮಗೆ ಹನಿ ನೀರೂ ಉಳಿಯುವುದಿಲ್ಲ. ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ, ಈ ಬಗ್ಗೆ ಅಧಿವೇಶನದಲ್ಲೂ ಹೋರಾಟ ಮಾಡುವುದಾಗಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾರ್ಥನೆ ಮಾತಿನ ಬೆನ್ನಲ್ಲೇ ಡಿಕೆಶಿ ಇಂದು ದಿಲ್ಲಿ ಭೇಟಿ ಕುತೂಹಲ
ಧಮ್ಕಿ ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ