ಸರ್ಕಾರ ಕ್ರೀಡಾಪಟುಗಳಿಗೆ ಸೂಕ್ತ ಸ್ಥಾನಮಾನ ನೀಡಲಿ

KannadaprabhaNewsNetwork |  
Published : Sep 01, 2024, 01:46 AM IST
ಪೋಟೋ೩೦ಸಿಎಲ್‌ಕೆ೧ ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ-೨೦೨೪-೨೫ನೇ ಸಾಲಿನ ಕ್ರೀಡಾಕೂಟವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ 2024- 25ನೇ ಸಾಲಿನ ಕ್ರೀಡಾಕೂಟವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಕ್ರೀಡಾಪಟುಗಳು ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸುತ್ತಿದ್ದು, ಸರ್ಕಾರವು ಕೂಡ ಕ್ರೀಡಾಪಟುಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಶುಕ್ರವಾರ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ), ಚಿತ್ರದುರ್ಗ ಶ್ರೀ ಶಾರದಾ ಶಾಲಾ ಶಿಕ್ಷಣ ಸಂಸ್ಥೆ, ಬಿ.ಸೀತಾರಾಮಶಾಸ್ತ್ರೀ ಪದವಿ ಪೂರ್ವ ಕಾಲೇಜು, ಡಾ.ಎಸ್.ರಾಧಕೃಷ್ಣ ಎಜುಕೇಷನ್ ಸೊಸೈಟಿ, ಎಸ್‌ಎಲ್‌ಕೆಎಚ್‌ಆರ್ ಪದವಿಪೂರ್ವ ಕಾಲೇಜು ನಾರಾಯಣಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ-2024-25ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕ್ಷೇತ್ರ ಎಲ್ಲರ ಮೆಚ್ಚಿನ ತಾಣವಾಗಿದ್ದು, ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಕ್ರೀಡೆಗಳು ನಡೆಯಬೇಕಿದೆ ಎಂದು ತಿಳಿಸಿದರು. ಪ್ರತಿವರ್ಷ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾಕೂಟ ಆಯೋಜಿಸುವ ಮೂಲಕ ಅನೇಕ ಕ್ರೀಡಾಪಟುಗಳ ಸಾಧನೆ ಪ್ರದರ್ಶಿಸಲು ಕಾಲೇಜು ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಕೇವಲ ತಾಲೂಕು ಮಟ್ಟವಲ್ಲದೆ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ಚಳ್ಳಕೆರೆ ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ಎಲ್ಲರ ವಿಶ್ವಾಸ, ಗೌರವ ಗಳಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿತ್ಯ ನೀಡುತ್ತಾ ಬಂದಿದೆ. ಪ್ರತಿವರ್ಷ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಆಟಗಳಲ್ಲಿ ಹೊಸ, ಹೊಸ ಕ್ರೀಡಾಪಟುಗಳನ್ನು ಹುಡುಕಿ ಅವರಿಗೆ ತರಬೇತಿ ಕೊಡುವ ಕಾರ್ಯವನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷ ಓ.ಸುಜಾತ, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಕಾರ್ಯದರ್ಶಿ ಮುಸ್ತಾಪ್, ತಿಮ್ಮಯ್ಯ, ಎಸ್.ರಾಮಕೃಷ್ಣ, ಅಶೋಕ್‌ಬಾಬು, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ