ನರಗುಂದ: ಕರ್ನಾಟಕ ಸಂಗೀತ ಪರಂಪರೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ನರಗುಂದದ ನಾದಬ್ರಹ್ಮಾನಂದ ಸ್ವಾಮಿಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಆರಂಭಿಸಬೇಕು ಹಾಗೂ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು ಹೇಳಿದರು.
ಸಮಸ್ತ ಕನ್ನಡಿಗರ ಧ್ವನಿಯಾಗಿ ಕರ್ನಾಟಕ ನೆಲ, ಜಲ, ಭಾಷೆಯನ್ನು ರಕ್ಷಿಸುವ ಸಲುವಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕರುನಾಡಿನ ಅಸ್ಮಿತೆ ಮತ್ತು ಏಕತೆಯ ಸಂಕೇತ. ಇಂದು ಕರ್ನಾಟಕದಲ್ಲಿ ಕನ್ನಡವನ್ನು ಹುಡುಕುವ ಸಂದರ್ಭ ಬಂದೊದಗಿದೆ, ಇದು ನಿಜಕ್ಕೂ ಕಳವಳದ ಸಂಗತಿ. ಕರ್ನಾಟಕ ಪ್ರತಿಯೊಬ್ಬ ಕನ್ನಡಿಗನ ಆಸ್ತಿ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಭಾಷೆ ಉಳಿದರೆ ಮಾತ್ರ ನಾಡು ಉಳಿದಂತೆ. ಹೀಗಾಗಿ ಎಲ್ಲರೂ ಯುವ ಹಾಗೂ ಹಿರಿಯ ಕವಿಗಳ ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಕನ್ನಡವನ್ನು ಬೆಳೆಸುವಲ್ಲಿ ಶ್ರಮಿಸಬೇಕಾಗಿದೆ ಎಂದರು.
ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚೆನ್ನಬಸಪ್ಪ ಕಂಠಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ತುಂಬಾ ವಿರಳವಾಗಿದೆ. ನಾವು ನಮ್ಮ ಮಕ್ಕಳಿಗೆ ಕನ್ನಡ ನಾಡು-ನುಡಿಯ ನೈಜ ಇತಿಹಾಸವನ್ನು ತಿಳಿಸಿ ಕನ್ನಡದ ಬಗೆಗೆ ಅವರಲ್ಲಿ ಅಭಿಮಾನ ಮೂಡಿಸಬೇಕು. ಆ ನಿಟ್ಟಿನಲ್ಲಿ ಶ್ರೀಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಯಿ ಕನ್ನಡಾಂಬೆಯ ಕೈಂಕರ್ಯವನ್ನು ನಿರಂತರವಾಗಿ ದಣಿವರಿಯದೆ ಮಾಡುತ್ತಿದೆ. ೧೧೦ ವರ್ಷಗಳ ಹಿಂದೆ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಇಂದಿನ ವರೆಗೆ ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ. ಹನಮಂತಗೌಡ್ರ, ಆರ್.ಬಿ. ಚಿನಿವಾಲರ, ಆರ್.ಕೆ. ಐನಾಪುರ, ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ, ಲಿಂಗರಾಜ ಮೊರಬದ ಇದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.