ಕನ್ನಡಪ್ರಭ ವಾರ್ತೆ ಮಂಡ್ಯ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳುವುದಕ್ಕೆ ರಾಜ್ಯಸರ್ಕಾರ ಆರ್ಥಿಕವಾಗಿ ನೆರವಾಗಬೇಕು ಎಂದು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್ ಮನವಿ ಮಾಡಿದರು.ಗುರುವಾರ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನೆರೆ ರಾಜ್ಯಗಳಲ್ಲಿ ರೋಗಿಗಳಿಗೆ ಮಾಡಲಾಗುವ ಡಯಾಲಿಸಿಸ್ ಖರ್ಚನ್ನು ಸರ್ಕಾರವೇ ನೇರವಾಗಿ ಭರಿಸುತ್ತಿದೆ. ಆಂಧ್ರಪ್ರದೇಶದಲ್ಲಿ ೧೫೦೦ ರು. ನೀಡುತ್ತಿದ್ದು, ಉಚಿತವಾಗಿ ಕ್ಯಾಲ್ಸಿಯಂ ಮಾತ್ರೆಗಳು, ಆ್ಯಂಬ್ಯುಲೆನ್ಸ್ ಸೇವೆ ಒದಗಿಸುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಮಾದರಿಯ ಸೇವೆ ರಾಜ್ಯದ ಜನರಿಗೂ ಸಿಗುವಂತಾಗಬೇಕು ಎಂದು ತಿಳಿಸಿದರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಡಯಾಲಿಸಿಸ್ ಮಾಡುವಾಗ ಗುಣಾತ್ಮಕವಾಗಿ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ೨ ಸಾವಿರ ರು. ಶುಲ್ಕ ವಿಧಿಸಿದರೆ ಬಿಜಿಎಸ್ ಆಸ್ಪತ್ರೆಯಲ್ಲಿ ೭೦೦ ರಿಂದ ೮೦೦ ರು. ಪಡೆಯಲಾಗುತ್ತಿದೆ. ಡಯಾಲಿಸಿಸ್‌ಗೆ ಸರ್ಕಾರವೇ ವೆಚ್ಚ ಭರಿಸುವಂತಾದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ, ಪ್ರಸ್ತುತ ರಾಜ್ಯದ ನಾಲ್ಕೈದು ಆಸ್ಪತ್ರೆಗಳಲ್ಲಷ್ಟೇ ಉಚಿತ ಸೇವೆ ಒದಗಿಸಲಾಗುತ್ತಿದ್ದು, ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ ಕೋರಿದರು.ಸಾಮಾನ್ಯವಾಗಿ ಮಧುಮೇಹ ರೋಗವಿದ್ದವರಿಗೆ, ನೋವಿನ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುವವರಿಗೆ, ಶೇ.೫ ರಿಂದ ೧೦ರಷ್ಟು ಮಂದಿಗೆ ವಂಶ ಪಾರಂಪರ್ಯವಾಗಿ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದಷ್ಟು ಫಾಸ್ಟ್‌ಫುಡ್, ಜಂಕ್‌ಫುಡ್‌ಗಳನ್ನು ಸೇವಿಸಬಾರದು. ಸೊಪ್ಪು, ಹಣ್ಣು- ತರಕಾರಿಯನ್ನು ಸೇವನೆ ಮಾಡುವುದರಿಂದ ಕಿಡ್ನಿಯನ್ನು ಆರೋಗ್ಯಪೂರ್ಣವಾಗಿಡಬಹುದು ಎಂದು ಹೇಳಿದರು.
ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಒಮ್ಮೆ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಿಡ್ನಿ ಸಮಸ್ಯೆ ಇರುವುದು ಆರಂಭದಲ್ಲಿ ಗೊತ್ತಾಗುವುದಿಲ್ಲ. ಎರಡು-ಮೂರನೇ ಹಂತ ದಾಟಿದ ಬಳಿಕ ಅದು ಗೊತ್ತಾಗುತ್ತದೆ. ಅತಿ ಹೆಚ್ಚು ಪ್ರೋಟೀನ್ ಮೂತ್ರದಲ್ಲಿ ಸೇರಿದಾಗ ಕಿಡ್ನಿ ಸಮಸ್ಯೆ ಎದುರಾಗುತ್ತದೆ ಎಂದು ವಿವರಿಸಿದರು.ಬಿಜಿಎಸ್ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ಮಾತನಾಡಿ, ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಸತ್ತವರ ಅಂಗಾಂಗಗಳನ್ನು ಹೊರತೆಗೆದು ಜನರನ್ನು ರಕ್ಷಿಸುವ ಕಾರ್ಯ ಮಾಡಲಾಗಿದೆ. ಕೊನೆಯ ಹಂತದ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದ ೫೦ ವರ್ಷದ ವ್ಯಕ್ತಿ ಎಸ್.ಎಚ್.ಹೇಮಂತ್‌ಕುಮಾರ್ ಅವರಿಗೆ ನಮ್ಮ ಆಸ್ಪತ್ರೆಯಲ್ಲಿ ಡ್ಯುಯೆಲ್ ಕಿಡ್ನಿ ಕಸಿ ಮಾಡಲಾಯಿತು. ಡಿಸೆಂಬರ್‌ನಿಂದ ಈವರೆಗೆ ಆಸ್ಪತ್ರೆಯಲ್ಲಿ ೯ ರಿಂದ ೧೦ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ, ಮೂತ್ರಪಿಂಡ ಕಸಿ, ಹೈ ಎಂಡ್ ಸರ್ಜರಿ ಮಾಡಲು ಅತ್ಯಾಧುನಿಕ ತಂತ್ರಜ್ಞಾನ, ಮೂತ್ರಪಿಂಡದ ಕಲ್ಲುಗಳಿಗೆ ಸಮಗ್ರ ಶಸ್ತ್ರಚಿಕಿತ್ಸೆ ವಿಧಾನ, ಆರೈಕೆ, ಪ್ರಾಸ್ಪೇಟ್ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಲೇಸರ್ ಚಿಕಿತ್ಸೆ, ಕಿಡ್ನಿ ಸಮಸ್ಯೆಗಳಿಗೆ ಕೇ- ಹೋಲ್ ಶಸ್ತ್ರಚಿಕಿತ್ಸೆ, ಶವಮೂತ್ರಪಿಂಡ ಕಸಿ, ಮಕ್ಕಳ ಮೂತ್ರಶಾಸ್ತ್ರ, ಸ್ತ್ರೀಮೂತ್ರ ಶಾಸ್ತ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವವುದು ಎಂದು ತಿಳಿಸಿದರು.ಸಂವಾದದಲ್ಲಿ ಡಾ.ನಂದೀಶ್, ಡಾ.ಗುರುಪ್ರಸಾದ್, ಡಾ.ಎಸ್.ನರೇಂದ್ರ, ಕಿಡ್ನಿ ಕಸಿ ಮಾಡಿಸಿಕೊಂಡ ಮೋಹನ್‌ಕುಮಾರ್, ಉಲ್ಲಾಸ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನವೀನ್‌ಕುಮಾರ್, ಆನಂದ್, ನಂಜುಂಡಸ್ವಾಮಿ ಹಾಜರಿದ್ದರು.