ಕನ್ನಡ ಶಾಲೆಗಳ ಸರ್ಕಾರ ಬೆಳೆಸಲಿ

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ಕೊಟ್ಟೂರು ಸಂಸ್ಥಾನಮಠದಿಂದ ಆಂಧ್ರಪ್ರದೇಶದ ಆಧೋನಿಯಲ್ಲಿ ಗಡಿನಾಡಿನಲ್ಲಿ ಕನ್ನಡ ಶಾಲೆ ತೆರೆಯಲಾಗಿದೆ. ಈ ಶಾಲೆಗೆ ಶ್ರೀಮಠದಿಂದಲೇ ತಿಂಗಳಿಗೆ ₹2 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ಕನ್ನಡ ಕಟ್ಟುವ ಕಾರ್ಯಕ್ಕೆ ಶ್ರೀಮಠ ಸದಾ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕನ್ನಡ ಶಾಲೆಗಳು ಸುಧಾರಣೆಯಾದರೆ, ಕನ್ನಡದ ಮುಂದಿನ ಪೀಳಿಗೆ ಬೆಳೆಸಿದಂತಾಗಲಿದೆ. ಹಾಗಾಗಿ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳನ್ನು ತೆರೆಯುವುದಕ್ಕಿಂತ ಕನ್ನಡ ಶಾಲೆಗಳನ್ನು ಸರ್ಕಾರಗಳು ಅಭಿವೃದ್ಧಿಪಡಿಸಿದರೆ ಕನ್ನಡ ಬೆಳೆಯಲು ಅನುಕೂಲವಾಗಲಿದೆ ಎಂದು ಸ್ಥಳೀಯ ಕೊಟ್ಟೂರು ಸಂಸ್ಥಾನಮಠದ ಡಾ. ಕೊಟ್ಟೂರು ಬಸವಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕನ್ನಡಪರ ಸಂಘಟನೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಪ್ರಯುಕ್ತ ಕನ್ನಡ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡ ಭಾಷೆ ಬಗ್ಗೆ ನಾವು ಬರೀ ಅಭಿಮಾನ ಪಡೆವುದಲ್ಲ. ವೇದಿಕೆ ಮೇಲೆ ಭಾಷಣ ಮಾಡಿ, ಮಕ್ಕಳನ್ನು ಇಂಗ್ಲಿಷ್‌ ಶಾಲೆಗೆ ಕಳುಹಿಸುವುದಲ್ಲ. ನಮ್ಮ ಮಕ್ಕಳು ಐಎಎಸ್‌. ಐಪಿಎಸ್, ಡಾಕ್ಟರ್‌, ಎಂಜಿನಿಯರ್ ಆಗಲಿ ಎಂದು ಬಯಸಿ, ಕನ್ನಡ ಅಭಿಮಾನ ಬಿತ್ತಿ ಉಳಿದವರ ಮಕ್ಕಳು ಕನ್ನಡ ಶಾಲೆಗೆ ಹೋಗಲಿ ಎಂದು ಬಯಸುವುದಕ್ಕಿಂತ ಕನ್ನಡ ಶಾಲೆಗಳನ್ನು ಸುಧಾರಣೆ ಮಾಡಿ ಮೊದಲು ಕನ್ನಡ ಉಳಿಸುವ ಕಾರ್ಯ ಮಾಡೋಣ ಎಂದರು.

ಕೊಟ್ಟೂರು ಸಂಸ್ಥಾನಮಠದಿಂದ ಆಂಧ್ರಪ್ರದೇಶದ ಆಧೋನಿಯಲ್ಲಿ ಗಡಿನಾಡಿನಲ್ಲಿ ಕನ್ನಡ ಶಾಲೆ ತೆರೆಯಲಾಗಿದೆ. ಈ ಶಾಲೆಗೆ ಶ್ರೀಮಠದಿಂದಲೇ ತಿಂಗಳಿಗೆ ₹2 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ಕನ್ನಡ ಕಟ್ಟುವ ಕಾರ್ಯಕ್ಕೆ ಶ್ರೀಮಠ ಸದಾ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.

ಮುಖಂಡ ಎಚ್‌.ಜಿ. ಗುರುದತ್‌ ಮಾತನಾಡಿ, ಕನ್ನಡವನ್ನು ನಾವೆಲ್ಲರೂ ಬೆಳೆಸಿ, ಉಳಿಸಬೇಕು. ಕನ್ನಡ ನಾಡು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ನೀರು ಕೊಡುತ್ತದೆ. ನಾವು ಕನ್ನಡಿಗರು ಎಂದಿಗೂ ಕನ್ನಡತನ ಬೆಳೆಸಿಕೊಂಡು ಸಾಗಬೇಕು ಎಂದರು.

ಮುಖಂಡ ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಬಳ್ಳಾರಿ, ವಿಜಯನಗರ ನೆಲದ ಪಾತ್ರ ಹಿರಿದಾಗಿದೆ. ಕರ್ನಾಟಕ ನಾಮಕರಣಕ್ಕೆ ಈಗ 50 ವರ್ಷ ಪೂರೈಸಿದೆ. ಎಲ್ಲ ಜಾತಿ, ಧರ್ಮವನ್ನು ಮೀರಿ ಕನ್ನಡಕ್ಕಾಗಿ ನಾವೆಲ್ಲರೂ ಧ್ವನಿ ಎತ್ತಬೇಕು ಎಂದರು.

ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಬಸವರಾಜ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಎ. ಲತಾ, ಉಪಾಧ್ಯಕ್ಷ ರೂಪೇಶ್‌ಕುಮಾರ, ಸದಸ್ಯರಾದ ಮುನ್ನಿ ಕಾಸಿಂ, ಮುಮ್ತಾಜ್‌ ಬೇಗಂ, ಜೀವರತ್ನಂ, ಎಚ್‌.ಕೆ. ಮಂಜುನಾಥ, ಎಲ್‌.ಎಸ್‌. ಆನಂದ. ತಾರಿಹಳ್ಳಿ ಜಂಬುನಾಥ, ಹನುಮಂತಪ್ಪ ಬುಜ್ಜಿ, ಹುಲುಗಪ್ಪ, ಕೆ. ಮಹೇಶ್‌ಕುಮಾರ, ರಮೇಶ್‌ ಗುಪ್ತಾ, ಶೇಕ್ಷಾವಲಿ, ಮುಖಂಡರಾದ ಶೇಖರ್‌ ಪರಗಂಟಿ, ಜಗದೀಶ್‌ ಕಾಮಟಗಿ, ಸಿ.ಎ. ಗಾಳೆಪ್ಪ, ಷಣ್ಮುಖ, ದಾದಾಪೀರ್‌, ದ್ವಾರಕೀಶ್‌, ನಾಗೇಂದ್ರ, ಕಾಸಟ್ಟಿ ಉಮಾಪತಿ, ಪಿ. ವೆಂಕಟೇಶ್‌, ಜಿ. ನೀಲಕಂಠ, ದಾದಾ ಖಲಂದರ್‌, ಗುಜ್ಜಲ ಗಣೇಶ್‌, ಬೋಡಾ ರಾಮಪ್ಪ, ಸಣ್ಣಮಾರೆಪ್ಪ, ಗೋವಿಂದ ಕುಲಕರ್ಣಿ, ಟಿಂಕರ್‌ ರಫೀಕ್‌ ಮತ್ತಿತರರಿದ್ದರು. ಸಾಧಕರಾದ ಲಕ್ಷ್ಮೀದೇವಿ, ಕಾರಮಂಚಪ್ಪ ಸೇರಿದಂತೆ ಹಲವು ಸಂಘ- ಸಂಸ್ಥೆಗಳ ಮುಖಂಡರನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಸವರಾಜ ನಿರ್ವಹಿಸಿದರು.

ಭವ್ಯ ಮೆರವಣಿಗೆ:

ನಗರದ ವಡಕರಾಯ ದೇವಾಲಯದ ಬಳಿ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಬೃಹತ್‌ ಕನ್ನಡ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ವಿವಿಧ ವೃತ್ತಗಳಲ್ಲಿ ಸಾಗಿ ಮೆರವಣಿಗೆ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಿತು. ಮೆರವಣಿಗೆಯಲ್ಲಿ ಹದಿನೈದು ಜೋಡಿ ಎತ್ತುಗಳು, ಕನ್ನಡದ ಮಹನೀಯರ ಭಾವಚಿತ್ರಗಳು ರಾರಾಜಿಸಿದವು. ಡೊಳ್ಳು ಕುಣಿತ, ಹಗಲು ವೇಷ ಕಲಾವಿದರು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಶಾಲಾ ಮಕ್ಕಳು, ಕನ್ನಡಪರ ಸಂಘಟನೆಗಳು ಪದಾಧಿಕಾರಿಗಳು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಸಾಗಿದರು.

Share this article