ಬಹುರಾಷ್ಟ್ರೀಯ ಕಂಪನಿಗಳಿಂದ ವಂಚನೆ, ಕೋಳಿ ಸಾಕಾಣಿಕೆ ರೈತರಿಗೆ ಮಾರುಕಟ್ಟೆಯಲ್ಲಿ ರಕ್ಷಣೆ ನೀಡಿ: ಮಲ್ಲಾಪುರ ದೇವರಾಜ
ಕನ್ನಡಪ್ರಭ ವಾರ್ತೆ ದಾವಣಗೆರೆಬಹುರಾಷ್ಟ್ರೀಯ ಕೋಳಿ ಮಾಂಸ ಮಾರಾಟ ಕಂಪನಿಗಳ ಹಾವಳಿಯಿಂದಾಗಿ ಕೋಳಿ ಸಾಕಾಣಿಕೆದಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೋಳಿ ಮಾಂಸಕ್ಕೆ ದರ ನಿಗದಿ, ಮಾರುಕಟ್ಟೆ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋಳಿ ಸಾಕಾಣಿಕೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ ಮಾತನಾಡಿ ಬಹುರಾಷ್ಟ್ರೀಯ ಕೋಳಿ ಮಾಂಸ ಮಾರಾಟ ಕಂಪನಿಗಳ ಹಾವಳಿಯಿಂದ ಸ್ವಾವಲಂಬಿ ಕೋಳಿ ಸಾಕಾಣಿಕೆದಾರ ರೈತರು ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರಿಳಿತದಿಂದ ತತ್ತರಿಸಿದ್ದು, ಕೃಷಿ ಸಚಿವರು ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಿ ಎಂದರು.ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು, ಕೋಳಿ ಮಾಂಸಕ್ಕೆ ದರ ನಿಗದಿ, ಮಾರುಕಟ್ಟೆಗೆ ರಕ್ಷಣೆ ಒದಗಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ನಿರಂತರ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಳಿ ಸಾಕಾಣಿಕೆದಾರ ರೈತರ ನೆರವಿಗೆ ಬರಬೇಕಾದ ಸರ್ಕಾರವೇ ಅಸಡ್ಡೆ ತೋರಿದ್ದು ನಿಜಕ್ಕೂ ನೋವುಂಟು ಮಾಡಿದೆ ಎಂದರು.
ರೈತರಿಗೆ ಕೋಳಿ ಸಾಕಾಣಿಕೆಯಲ್ಲಿ ಉತ್ಪಾದನೆ ವೆಚ್ಚಕ್ಕಿಂತಲೂ ಅತೀ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ವಿಎಚ್ಎಂ ಎಂಬ ಕಂಪನಿಯು ಅಂತರ್ಜಾಲದಲ್ಲಿ ದರ ನಿಗದಿಪಡಿಸಿ, ಮಾರುಕಟ್ಟೆಯಲ್ಲಿ ರೈತರಿಂದ ಕೋಳಿ ಮಾಂಸ ಖರೀದಿಸಲು ಜನರು ಬರದಂತೆ ನಿಯಂತ್ರಣ ಮಾಡುತ್ತಿದೆ. ಇಂತಹ ಕಂಪನಿಗಳ ಮೂಲ ಉದ್ದೇಶವೆಂದರೆ, ಕೋಳಿ ಸಾಕಾಣಿಕೆದಾರರ ಆರ್ಥಿಕವಾಗಿ ದಿವಾಳಿ ಮಾಡಿ, ಮಾರುಕಟ್ಟೆ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿದೆ ಎಂದು ಆರೋಪಿಸಿದರು.ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ನಿರ್ಮಿಸಬೇಕು. ಕೋಳಿ ಸಾಕಾಣಿಕೆ ರೈತರಿಗೆ ಮಾರುಕಟ್ಟೆಯಲ್ಲಿ ರಕ್ಷಣೆ ನೀಡಿ, ಕೋಳಿ ಮಾಂಸಕ್ಕೆ ದರ ನಿಗದಿಪಡಿಸಲು ಸಮಿತಿ ರಚಿಸಬೇಕು. ಮಾರುಕಟ್ಟೆಯಲ್ಲಿ ಕೋಳಿ ಮಾಂಸ ದರವನ್ನು ಸರ್ಕಾರವೇ ನಿಗದಿಪಡಿಸಲು ಕಾನೂನು ತರಬೇಕು. ದಾವಣಗೆರೆ ಜಿಲ್ಲೆಯಲ್ಲೇ ಸುಮಾರು 480ಕ್ಕೂ ಹೆಚ್ಚು ಕೋಳಿ ಸಾಕಾಣಿಕೆದಾರ ರೈತರು ಸಂಘದಲ್ಲಿ ನೋಂದಣಿ ಮಾಡಿಸಿದ್ದಾರೆ. ಇನ್ನೂ ಸಾಕಷ್ಟು ಜನರು ಕೋಣಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದಾವಣಗೆರೆಯೊಂದರಲ್ಲೇ ನಿತ್ಯವೂ ಸುಮಾರು 40 ಸಾವಿರ ಕೋಳಿ ದಿನಕ್ಕೆ ಖರ್ಚಾಗುತ್ತವೆ. ಅಂದರೆ, ದಿನಕ್ಕೆ 1 ಕೋಳಿ 2 ಕೆಜಿ ತೂಗಿದರೂ ನಿತ್ಯವೂ ದಾವಣಗೆರೆ ಮಹಾ ನಗರವೊಂದಕ್ಕೆ 80 ಸಾವಿರ ಕೆಜಿ ಕೋಳಿ ಮಾಂಸ ಬೇಕಾಗುತ್ತದೆ. ಇನ್ನಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿ ಎಂದು ಮಲ್ಲಾಪುರ ದೇವರಾಜ ಒತ್ತಾಯಿಸಿದರು.ರೈತ ಸಂಘದ ಬುಳ್ಳಾಪುರ ಹನುಮಂತಪ್ಪ, ಗುರುಮೂರ್ತಿ, ಶಿವಮೂರ್ತೆಪ್ಪ, ಎ.ಕೆ.ನಾಗರಾಜ, ಮಿಯ್ಯಾಪುರ ತಿರುಮಲೇಶ, ನಾಗರಕಟ್ಟೆ ಜಯನಾಯ್ಕ, ಹೆಬ್ಬಾಳ್ ರಾಜಯೋಗಿ, ಬುಳ್ಳಾಪುರ ಪರಮೇಶ್ವರಪ್ಪ, ಆರ್.ಜಿ.ಬಸವರಾಜ ರಾಂಪುರ, ಜಿ.ಸಿ.ಕಲ್ಲೇಶ ಬೋರಗೊಂಡನಹಳ್ಳಿ, ಸಿ.ನಾಗರಾಜ ಐಗೂರು ಇತರರಿದ್ದರು. ಇಂದು ಕೃಷಿ ಸಚಿವರಿಗೆ ಮನವಿ
ಕೃಷಿ ಸಚಿವ ಚಲುವರಾಯ ಸ್ವಾಮಿ ಬುಧವಾರ (ನ.22ರಂದು) ದಾವಣಗೆರೆಗೆ ಆಗಮಿಸಲಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಿಂದ ಕೋಳಿ ಸಾಕಾಣಿಕೆದಾರ ರೈತರನ್ನು ರಕ್ಷಿಸಬೇಕು. ಕೋಳಿ ಸಾಕಾಣಿಕೆದಾರರ ಸಂಘದ ಬೇಡಿಕೆಗಳ ಈಡೇರಿಸಲು ಉಭಯ ಸಂಘಟನೆಗಳಿಂದ ಕೃಷಿ ಸಚಿವರಿಗೆ ಮನವಿ ಮಾಡಲಿದ್ದು, ಕಂಪನಿಗಳ ಹುನ್ನಾರದ ಬಗ್ಗೆಯೂ ಸಂಘಟನೆಗಳಿಂದ ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಹೇಳಿದರು.ರೈತರಿಗೆ ಕೋಳಿ ಸಾಕಾಣಿಕೆಯಲ್ಲಿ 100 ರು. ಖರ್ಚು ತಗುಲಿದರೆ, 70 ರು.ಗೆ ಕಂಪನಿಯವರು ವ್ಯಾಪಾರ ಮಾಡಿ ಮುಗಿಸುತ್ತಾರೆ. ಇದರಿಂದ ರೈತರಿಗೆ ಪ್ರತಿ ಕೋಳಿಯಿಂದಲೂ 30-40 ರು. ನಷ್ಟವಾಗುತ್ತದೆ. ಇನ್ನಾದರೂ ಸರ್ಕಾರ ಕೋಳಿ ಸಾಕಾಣಿಕೆ ರೈತರಿಗೆ ಮಾರುಕಟ್ಟೆಯಲ್ಲಿ ರಕ್ಷಣೆ ನೀಡಿ, ಕೋಳಿ ಮಾಂಸ ದರ ನಿಗದಿಗೆ ಸಮಿತಿ ರಚಿಸಬೇಕು. ಮಾರುಕಟ್ಟೆಯಲ್ಲಿ ಕೋಳಿ ಮಾಂಸ ದರ ನಿಗದಿ ಅಧಿಕಾರವನ್ನು ಸರ್ಕಾರ ನಿರ್ವಹಿಸಲಿ.
- ಮಲ್ಲಾಪುರ ದೇವರಾಜ, ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ