ನೇಕಾರಿಗೆ ಸರ್ಕಾರ ಸೌಲಭ್ಯ ನೀಡಲಿ

KannadaprabhaNewsNetwork |  
Published : Aug 10, 2024, 01:39 AM IST
ಕಾರ್ಯಕ್ರಮದಲ್ಲಿ ಹಿರಿಯ ಕೈಮಗ್ಗ ನೇಕಾರರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಧುನಿಕತೆಯ ಭರಾಟೆಯಲ್ಲಿ ಪಾವರ್‌ಲೂಮ್ ಆಗಿ ಪರಿವರ್ತನೆಗೊಂಡರೂ ಇನ್ನೂ ಕೈಮಗ್ಗಗಳು ಬೆಟಗೇರಿಯಲ್ಲಿ ಸದ್ದು ಮಾಡುತ್ತಿವೆ

ಗದಗ: ನೇಕಾರರು, ಜವಳಿ ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ, ಸೌಲಭ್ಯ ನೀಡುವ ಮೂಲಕ ಪಾರಂಪರಿಕ ವೃತ್ತಿ ಮುನ್ನಡೆಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕೆಂದು ಹಿರಿಯ ಜವಳಿ ಉತ್ಪಾದಕ ಬಲರಾಮ ಬಸವಾ ಹೇಳಿದರು.

ಅವರು ಬೆಟಗೇರಿಯ ಬಸವಾ ಸಮೂಹ ಸಂಸ್ಥೆಯಿಂದ ಮಗ್ಗದ ಮನೆಯ ಪ್ರಾಂಗಣದಲ್ಲಿ ನಡೆದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭದಲ್ಲಿ ಹಿರಿಯ ಕೈಮಗ್ಗ ನೇಕಾರರನ್ನು ಗೌರವಿಸಿ ಮಾತನಾಡಿದರು.

ನೇಕಾರಿಕೆ ಮತ್ತು ಜವಳಿ ಉತ್ಪಾದನೆ ದೇಶದಲ್ಲಿಯೇ ಹೆಸರಾಗಿತ್ತು. ದೆಹಲಿಯ ಕೆಂಪುಕೋಟಿಯ ಮೇಲೆ ವಿರಾಜಮಾನವಾಗಿ ಹಾರಾಡಿದ ತ್ರಿವರ್ಣ ಧ್ವಜ ಬೆಟಗೇರಿಯ ನೇಕಾರರು ನೇಯ್ದಿದ್ದು ಎಂಬುದು ಐತಿಹಾಸಿಕ ದಾಖಲೆ. 4-5 ತಲೆಮಾರಿನಿಂದ ಸಾಗಿ ಬಂದಿರುವ ಕೈಮಗ್ಗ ಕಾಲಕ್ರಮೇಣ ಸುಧಾರಿಸುತ್ತ ಬಂದು ಆಧುನಿಕತೆಯ ಭರಾಟೆಯಲ್ಲಿ ಪಾವರ್‌ಲೂಮ್ ಆಗಿ ಪರಿವರ್ತನೆಗೊಂಡರೂ ಇನ್ನೂ ಕೈಮಗ್ಗಗಳು ಬೆಟಗೇರಿಯಲ್ಲಿ ಸದ್ದು ಮಾಡುತ್ತಿವೆ ಎಂದರು.

ಒಂದು ಕಾಲದಲ್ಲಿ ಶೇ.75 ರಷ್ಟು ಕಾರ್ಮಿಕರು ಕೈಮಗ್ಗದಲ್ಲಿ ನೇಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಹೊಸ ತಲೆಮಾರಿನ ಜವಳಿ ಉತ್ಪಾದಕರು, ಜವಳಿ ಉತ್ಪಾದನೆಯಲ್ಲಿ ಹೊಸ ವಿನ್ಯಾಸ ಅಳವಡಿಸಿಕೊಂಡಿದ್ದರ ಪರಿಣಾಮ ಮಾರುಕಟ್ಟೆಯಲ್ಲಿ ಬೆಟಗೇರಿಯ ಜವಳಿ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತ ಬಂತು. ಹಳೆ ಮತ್ತು ಹೊಸ ತಲೆಮಾರಿನ ನೇಕಾರರು ಕೈಮಗ್ಗ ಹಾಗೂ ಪಾವರ್‌ಲೂಮ್‌ದಲ್ಲಿ ಪರಿಣಿತಿ ಹೊಂದಿದ್ದಾರೆ ಎಂದರು.

ಬಸವಾ ಸಮೂಹ ಸಂಸ್ಥೆಯ ಮಗ್ಗದ ಮನೆಯಲ್ಲಿ ನೇಕಾರಿಕೆ ವೃತ್ತಿಯಲ್ಲಿರುವವರಿಗೆ ಕೆಲವು ಸೌಲಭ್ಯ ನಮ್ಮ ಇತಿಮಿತಿಯಲ್ಲಿ ನೀಡಿದ್ದೇವೆ ಸರ್ಕಾರವೂ ಸೌಲಭ್ಯ ನೀಡುವಂತ್ತಾದರೆ ನೇಕಾರರೂ ಹಾಗೂ ಜವಳಿ ಉತ್ಪಾದಕರು ತಮ್ಮ ವೃತ್ತಿ ಮುಂದುವರೆಸಲು ಸಾಧ್ಯವಾಗುವದು. ನೇಕಾರರಿಗೆ ನೀಡುವ ಸನ್ಮಾನ ನಿಧಿಯನ್ನು 5 ಸಾವಿರದಿಂದ ₹20 ಸಾವಿರಕ್ಕೇರಿಸಬೇಕು. 60 ವರ್ಷ ಮೇಲ್ಪಟ್ಟ ನೇಕಾರ ಕುಟುಂಬಕ್ಕೆ ಭವಿಷ್ಯ ನಿಧಿ ರೂಪಿಸಬೇಕು, ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಸೌಲಭ್ಯ ನೀಡಬೇಕೆಂದರು.

ಈ ವೇಳೆ ಹಿರಿಯ ಕೈಮಗ್ಗ ನೇಕಾರರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಹಿರಿಯರಾದ ಸಂಕಣ್ಣ ಹಾದಿಮನಿ, ತುಕಾರಾಮ ಕಬಾಡಿ, ನಾಗಪ್ಪ, ಕುಮಾರ, ಸುಭಾಸ, ಲತಾ, ಕೃಷ್ಣಾ ಸೇರಿದಂತೆ ಇತರರು ಇದ್ದರು. ಶ್ರೀನಿವಾಸ ಸ್ವಾಗತಿಸಿದರು. ಅನೂಪ ಪರಿಚಯಿಸಿದರು. ರಾಕೇಶ ನಿರೂಪಿಸಿದರು. ಪ್ರಸನ್ನ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ