ಹೊರಗುತ್ತಿಗೆ ನೌಕರರ ಸೇವೆ ಕಾಯಂಗೆ ಸರ್ಕಾರ ಕ್ರಮ ಕೈಗೊಳ್ಳಲಿ

KannadaprabhaNewsNetwork | Published : Sep 3, 2024 1:30 AM

ಸಾರಾಂಶ

ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವುದಾಗಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮ ಕೈಗೊಳ್ಳದೇ, ವಂಚಿಸುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಸೆಕ್ರೆಟರೇಟ್ ಸದಸ್ಯ ಚಂದ್ರಶೇಖರ ಮೇಟಿ ಆಕ್ರೋಶ ವ್ಯಕ್ತಪಡಿಸಿದರು.

- ದಾವಣಗೆರೆ ವಿವಿ ಸಿ, ಡಿ ಗ್ರೂಪ್‌ ಹೊರಗುತ್ತಿಗೆ ನೌಕರರ ಸಮ್ಮೇಳನದಲ್ಲಿ ಚಂದ್ರಶೇಖರ ಮೇಟಿ ವಾಗ್ದಾಳಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವುದಾಗಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮ ಕೈಗೊಳ್ಳದೇ, ವಂಚಿಸುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಸೆಕ್ರೆಟರೇಟ್ ಸದಸ್ಯ ಚಂದ್ರಶೇಖರ ಮೇಟಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಎಐಯುಟಿಯುಸಿ ವತಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಸಿ ಅಂಡ್ ಡಿ ಗ್ರೂಪ್‌ ಹೊರಗುತ್ತಿಗೆ ನೌಕರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ ಎಂದರು.

ರಾಜ್ಯದಲ್ಲಿ ಕಾಯಂ ನೌಕರರಿಗಿಂತ ಹೊರಗುತ್ತಿಗೆ ನೌಕರರ ಸಂಖ್ಯೆಯೇ ಹೆಚ್ಚಾಗಿದೆ. ಕಾಯಂ ಸ್ವರೂಪದ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರೇ ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಧಿಕಾರ ಇಲ್ಲದಿದ್ದಾಗ ದೊಡ್ಡ ದೊಡ್ಡ ಬಂಡವಾಳಗಾರರಿಗೆ ಸಾವಿರಾರು ಎಕರೆ ಭೂಮಿ ಪರಭಾರೆ ವಿರೋಧಿಸುವವರು, ಅಧಿಕಾರಕ್ಕೆ ಬಂದ ತಕ್ಷಣ ಅದೇ ಶ್ರೀಮಂತರ ಪರವಾದ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಕಿಡಿಕಾರಿದರು.

ಈಗಾಗಲೇ ಬೇರೆ ಬೇರೆ ಇಲಾಖೆಗಳಲ್ಲಿ ಸರ್ಕಾರದ ನೀತಿಗಳಿಂದಾಗಿ ಕಾಯಂ ಸ್ವರೂಪದ ಹುದ್ದೆಗಳ ವಿರುದ್ಧವಾಗಿ ಗೌರವಧನ ಮೇಲೆ ಕಾರ್ಯನಿರ್ವಹಿಸುವ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಕೇವಲ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಇದೆ. ಹಾಗಾಗಿ ನಾವು ನಮ್ಮ ಸೇವಾ ಭದ್ರತೆಗಾಗಿ ಸಂಘಟಿತ ಹೋರಾಟ ನಡೆಸಬೇಕಿದೆ. ಜಾತಿ, ಧರ್ಮಗಳ ಆದಾರದಲ್ಲಿ ಸರ್ಕಾರವು ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ನಾವು ಪ್ರಜ್ಞಾವಂತರಾಗುವ ಮೂಲಕ ಸಂಘಟಿತ ಹೋರಾಟ ಮಾಡಬೇಕಿದೆ. ಅದೊಂದೇ ಮಾರ್ಗದಿಂದ ನಾವು ನ್ಯಾಯ ಪಡೆಯಲು ಸಾಧ್ಯ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಸಿ ಅಂಡ್ ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೈದಾಳೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಲಲಿತಮ್ಮ, ಅಧ್ಯಕ್ಷ ಇಸ್ಮಾಯಿಲ್, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್ ನೌಕರರ ಸಂಘದ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಹಾಗೂ ಸಂಘದ ಉಪಾಧ್ಯಕ್ಷರು ಇದ್ದರು.

- - -

ಕೋಟ್‌ ಸರ್ಕಾರಗಳು ಜನರಿಂದ ತೆರಿಗೆ ವಸೂಲಿ ಮಾಡಿದರೂ, ಅದೇ ಜನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ತೆರಿಗೆ ಪಾವತಿಸುವ ಜನ ಶಿಕ್ಷಣ, ಆರೋಗ್ಯ, ಉದ್ಯೋಗದಿಂದಲೂ ವಂಚಿತರಾಗುತ್ತಿದ್ದಾರೆ. ಕಾರ್ಮಿಕ ವರ್ಗವು ತಮಗಾಗುವ ಅನ್ಯಾಯದ ಮೂಲ ಕಾರಣವನ್ನು ಅರಿಯಬೇಕು. ಸಂಘಟಿತ ಹೋರಾಟ ಕಟ್ಟದ ಹೊರತು, ನ್ಯಾಯ ಪಡೆಯಲು ಬೇರೆ ಮಾರ್ಗಗಳು ಇಲ್ಲ

- ಚಂದ್ರಶೇಖರ ಮೇಟಿ, ಎಐಟಿಯುಸಿ ಮುಖಂಡ

- - - -2ಕೆಡಿವಿಜಿ3:

ದಾವಣಗೆರೆಯಲ್ಲಿ ಸೋಮವಾರ ದಾವಣಗೆರೆ ವಿಶ್ವ ವಿದ್ಯಾನಿಲಯದ ಸಿ ಅಂಡ್ ಡಿ ಗ್ರೂಪ್‌ ಹೊರ ಗುತ್ತಿಗೆ ನೌಕರರ ಸಮ್ಮೇಳನವನ್ನು ಎಐಟಿಯುಸಿ ರಾಜ್ಯ ಸೆಕ್ರೆಟರೇಟ್ ಸದಸ್ಯ ಚಂದ್ರಶೇಖರ ಮೇಟಿ ಉದ್ಘಾಟಿಸಿ ಮಾತನಾಡಿದರು.

Share this article