ಸರ್ಕಾರ ನೀರಾವರಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲಿ

KannadaprabhaNewsNetwork |  
Published : Feb 06, 2025, 11:45 PM IST

ಸಾರಾಂಶ

ತರಳಬಾಳು ಹುಣ್ಣಿಮೆ ಮಹೋತ್ಸವಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಒತ್ತಾಯ

ಕನ್ನಡಪ್ರಭ ವಾರ್ತೆ ಸಿರಿಗೆರೆ

ರಾಜ್ಯದಲ್ಲಿ ಸುಮಾರು 13 ಲಕ್ಷ ಹೆಕ್ಟೇರ್‌ ಭೂಮಿ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಕಾದಿದೆ. ಸರ್ಕಾರ ಆ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಸಂಸದ ಗೋವಿಂದ ಕಾರಜೋಳ ಸಿಎಂ ಅವರನ್ನು ಒತ್ತಾಯಿಸಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ 3ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಅಧಿಕಾರದಲ್ಲಿರುವ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದು ಈ ಕೆಲಸ ಮಾಡಿಸಬೇಕು. ಹಲವು ವರ್ಷಗಳ ಕಾಲ ಅಧಿಕಾರದಲ್ಲಿರುವ ಯುವ ಶಾಸಕರು ಈ ಕೆಲಸಕ್ಕೆ ಮುಂದಾಗಬೇಕು. ನಿಮ್ಮ ಜೊತೆ ಸಿಎಂ ಬಳಿ ಬರಲು ನಾನು ಸಿದ್ಧವಾಗಿದ್ದೇನೆ ಎಂದರು.

ಸರ್ಕಾರವನ್ನು ನಂಬಿಕೊಳ್ಳದೆ ರೈತರು ಸ್ವಂತ ಬಡವಾಳ ಹೂಡಿಕೊಂಡು ಸುಮಾರು 16 ಲಕ್ಷ ಎಕರೆ ಭೂಮಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಇವರಿಗೆ ನೆರವಾಗುವ ಚಿಂತನೆ ಸರ್ಕಾರಕ್ಕೆ ಇರಬೇಕು. 66 ಲಕ್ಷ ಹೆಕ್ಟೇರ್‌ ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದಾಗಿದ್ದು, ಬೃಹತ್‌ ನೀರಾವರಿ ಇಲಾಖೆಯಿಂದ 40 ಲಕ್ಷ ಹೆಕ್ಟೇರ್‌ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 10 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಸಿಕ್ಕಿದೆ. ಉಳಿದಿರುವ ಭೂಮಿಗೆ ನೀರಿನ ಅಗತ್ಯವಿದೆ. ಅದನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಾಮಾಜಿಕ ಕಳಕಳಿ ಉಳ್ಳವರು. ಆದ್ದರಿಂದಲೇ ಅವರು ದೂರದೃಷ್ಟಿಯಿಂದ ಹಲವು ಕೆರೆಗಳನ್ನು ತುಂಬಿಸಿದ್ದಾರೆ. ಇದರಿಂದ ರೈತರು ಸಂತೋಷವಾಗಿದ್ದಾರೆ. ಜಾನುವಾರುಗಳಿಗೆ ನೀರು ಸಿಕ್ಕಿದೆ. ಇಂತಹ ಸಮಾಜಮುಖಿ ಕೆಲಸ ಮಾಡುವ ಮೂಲಕ ಅವರು ಬಸವಾದಿ ಶರಣರ ತೇರನ್ನು ಎಳೆಯುತ್ತಿದ್ದಾರೆ ಎಂದರು.

ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಹಿಂದೆ ರಾಜಕಾರಣ ಸಮಾಜದ ಸೇವೆಗಾಗಿ ಬಳಕೆಯಾಗುತ್ತಿತ್ತು. ಇಂದು ರಾಜಕಾರಣ ಎಂದರೆ ಹಣ ಮತ್ತು ಅಧಿಕಾರಕ್ಕೆ ಬಳಕೆಯಾಗುತ್ತಿದೆ. ರಾಜಕಾರಣಿಗಳು ಬಡಜನರ ಚಿಂತೆ ಮಾಡಿಬೇಕು ಅಂದಾಗ ದೇಶದಲ್ಲಿ ಸಂವಿಧಾನ ಹಾಗೂ ಹಿಂದುತ್ವವೂ ಉಳಿಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಚ್.ಡಿ.ತಮ್ಮಯ್ಯ, ವೀರೇಂದ್ರ ಪಪ್ಪಿ, ಬಿ.ದೇವೇಂದ್ರಪ್ಪ, ಧನಂಜಯ ಸರ್ಜಿ, ಪ್ರಕಾಶ್‌ ಕೋಳಿವಾಡ, ಕೆ.ಎಸ್.‌ಬಸವಂತಪ್ಪ, ಬಿ.ಪಿ. ಹರೀಶ್‌, ಎಚ್.ಕೆ.ಸುರೇಶ್‌, ಮಿಮಿಕ್ರಿ ಗೋಪಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು