ಹರಪನಹಳ್ಳಿ: ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಕೆ.ಶಿವಮೂರ್ತಿ ತಾಕೀತು ಮಾಡಿದರು.ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಗೃಹಲಕ್ಷ್ಮಿ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಾರದು. ಈ ಬಗ್ಗೆ ದೂರುಗಳಿದ್ದು, ಗಮನ ಹರಿಸಿ ಎಂದು ಸ್ಥಳೀಯ ಸಿಡಿಪಿಒ ಅಶೋಕ ಅವರಿಗೆ ಸೂಚಿಸಿದರು.
ಸಿಡಿಪಿಒ ಅಶೋಕ ಶೇ.90ಕ್ಕೂ ಹೆಚ್ಚು ಗೃಹಲಕ್ಷ್ಮಿ ಯೋಜನೆ ತಾಲೂಕಿನಲ್ಲಿ ಜಾರಿಯಾಗಿದೆ ಎಂದಾಗ ಶೇ.100ರಷ್ಟು ಸಾಧನೆಯಾಗಬೇಕು ಎಂದು ಅಧ್ಯಕ್ಷ ಕೆ.ಶಿವಮೂರ್ತಿ ಹೇಳಿದರು.ಗೃಹಜ್ಯೋತಿ ಯೋಜನೆ ಬಗ್ಗೆ ಮಾಹಿತಿ ನೀಡಿದ ತೆಲಿಗಿ ಬೆಸ್ಕಾಂ ಎಇಇ ಪಂಡಿತಾರಾದ್ಯ 66393 ಫಲಾನುಭವಿಗಳಿಗೆ ಶೂನ್ಯ ಬಿಲ್ ಬಂದಿದೆ. 3216 ಬಳಕೆದಾರರಿಗೆ ಸ್ವಲ್ಪ ಮಟ್ಟಿನ ಬಿಲ್ ಬಂದಿದೆ. ಈ ತಿಂಗಳಿನಿಂದ ಶಾಲಾ ಕಾಲೇಜುಗಳಿಗೂ ಉಚಿತ ವಿದ್ಯುತ್ ಸರ್ಕಾರದ ಆದೇಶದ ಪ್ರಕಾರ ನೀಡಲಾಗುವುದು ಎಂದು ಹೇಳಿದರು.
ವಿದ್ಯುತ್ ತಂತಿಗಳಿಗೆ ಕೊಂಡಿ ಹಾಕಿಕೊಂಡು ಮನೆಗೆ ಬಳಸುವ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಗೆ ಒಳಪಡಿಸಿ ಎಂದು ಅಧ್ಯಕ್ಷ ಶಿವಮೂರ್ತಿ ಹೇಳಿದಾಗ ಎಇಇ ಪ್ರಕಾಶ, ಕೊಂಡಿ ಹಾಕುವವರ ಮನೆಗಳಿಗೆ ಮೀಟರ್ ಇರುವುದಿಲ್ಲ, ಸ್ಟೇಟ್ ಪಾಲಿಸಿ ಅಲ್ಲಿಂದಲೇ ಆಗಬೇಕು ಎಂದು ನುಡಿದರು.
ಸ್ಥಳೀಯ ಡಿಪೋದ ಬಸ್‌ಗಳು ಹೊಸಪೇಟೆಗೆ ಹೋಗುವಾಗ ಢಾಣಾಪುರ ಮುಂತಾದ ಹಳ್ಳಿಗಳಲ್ಲಿ ಸಂಪರ್ಕ ರಸ್ತೆ ಮೂಲಕ ಗ್ರಾಮಕ್ಕೆ ತಲುಪಿ ಹೋಗಲು ನಿರ್ವಾಹಕರಿಗೆ ಸೂಚಿಸಿ ಎಂದು ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿಯನ್ನು ಆಹಾರ ಶಿರಸ್ತೇದಾರ ಭರತರಾಜ್ ಹಾಗೂ ನಿರೀಕ್ಷಕಿ ಕೊಟ್ರಮ್ಮ ಮಾಹಿತಿ ನೀಡಿದರು.
ತಹಶೀಲ್ದಾರ ಬಿ.ವಿ. ಗಿರೀಶಬಾಬು, ಪಂಚಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾದ್ಯಕ್ಷ ಎಚ್.ಚಂದ್ರಪ್ಪ, ತಾಪಂ ಸಹಾಯಕ ನಿರ್ದೆಶಕ ವೀರಣ್ಣ ಲಕ್ಕಣ್ಣನವರ್ ಉಪಸ್ಥಿತರಿದ್ದರು.