ಮೃತ ಪರುಶುರಾಮ ಕುಟುಂಬ ಒತ್ತಾಯ । ಎಸ್ಪಿ ಭೇಟಿ ನೀಡಿದ ವೇಳೆ ಆಕ್ರೋಶ
ಗೃಹ ಸಚಿವ ಪರಮೇಶ್ವರ ಅವರು ನಮ್ಮ ಮನೆಗೆ ಬರುವ ಮುನ್ನ ಯಾದಗಿರಿ ಶಾಸಕ ಮತ್ತು ಅವರ ಮಗನನ್ನು ಮೊದಲು ಬಂಧಿಸಬೇಕು ಎಂದು ಮೃತ ಪಿಎಸ್‌ಐ ಪರಶುರಾಮ ಕುಟುಂಬಸ್ಥರು ಒತ್ತಾಯಿಸಿದರು.
ತಾಲೂಕಿನ ಸೋಮನಾಳ ಗ್ರಾಮದ ಮನೆಗೆ ಆ.೭ರಂದು ಗೃಹ ಸಚಿವ ಜಿ. ಪರಮೇಶ್ವರ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಕೊಪ್ಪಳ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಕುಟುಂಬಸ್ಥರು ಈ ಮೇಲಿನಂತೆ ಒತ್ತಾಯ ಮಾಡಿದರು.ಪರಶುರಾಮ ನಿಧನದ ಐದನೇ ದಿನದ ಕಾರ್ಯವನ್ನು ಅವರ ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ಕೆ ರಾಯಚೂರಿನಿಂದ ಅವರ ಪತ್ನಿ ಶ್ವೇತಾ ಸಹ ಆಗಮಿಸಿದ್ದರು.
ಇದೇ ವೇಳೆ ಸ್ಥಳದಲ್ಲಿದ್ದ ದಲಿತ ಸಂಘಟನೆಗಳ ಪದಾಧಿಕಾರಿಗಳು ಸಹ ಆಕ್ರೋಶಭರಿತರಾಗಿ ಮಾತನಾಡಿದರೂ ಆ ಎಲ್ಲ ಗುಂಪಿಗೆ ಸಮಾಧಾನದಿಂದಲೇ ಉತ್ತರಿಸಿದ ಎಸ್ಪಿ, ಮನೆ ಒಳಗೆ ತೆರಳಿ, ಮೃತ ಪಿಎಸ್‌ಐ ತಾಯಿ ಮತ್ತು ಪತ್ನಿ ಜೊತಗೂ ಮಾತನಾಡಿದರು.