ಸತಿ ಪತಿ ಅರ್ಥ ಮಾಡಿಕೊಂಡು ಜೀವನ ನಡೆಸಲಿ: ಮಾದಾರ ಚನ್ನಯ್ಯ ಶ್ರೀ

KannadaprabhaNewsNetwork |  
Published : Jun 07, 2025, 04:46 AM IST
ಮುಂಡಗೋಡ: ಶುಕ್ರವಾರ ಇಲ್ಲಿಯ ನಗರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಸಂಯುಕ್ತ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರುಗಿತು | Kannada Prabha

ಸಾರಾಂಶ

ಸತಿ-ಪತಿಗಳು ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ.

ಮುಂಡಗೋಡ: ಸತಿ-ಪತಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂದು ಚಿತ್ರದುರ್ಗ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದರು.

ಶುಕ್ರವಾರ ಇಲ್ಲಿಯ ನಗರಸಭಾ ಭವನದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ವಧು ವರರಿಗೆ ಆಶೀರ್ವದಿಸಿ ಮಾತನಾಡಿದರು.

ಸತಿ-ಪತಿಗಳು ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ. ಒಂದಾಗಿ ಸುಖ ಸಂಸಾರ ನಡೆಸಿದರೆ ಮಾತ್ರ ದಾಂಪತ್ಯ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಗಂಡು ಹೆಣ್ಣು ಪರಸ್ಪರ ಅರ್ಥ ಮಾಡಿಕೊಂಡು ನಡೆಸುವ ಸಂಸಾರ ಸಮಾಜಕ್ಕೆ ಮಾದರಿಯಾಗಿರುತ್ತದೆ. ಜೀವನದಲ್ಲಿ ಬಾಲ್ಯ, ಯೌವನ, ಮುಪ್ಪು ಈ ಮೂರು ಹಂತಗಳು ಬರುತ್ತವೆ. ೨ನೇ ಹಂತದ ಜೀವನಕ್ಕೆ ಪಾದಾರ್ಪಣೆ ಮಾಡುವುದೇ ವಿವಾಹ. ಮದುವೆ ಎಂಬುವುದು ಒಂದು ಬಾರಿ ಮಾತ್ರ ನಡೆಯುತ್ತದೆ. ಹುಟ್ಟಿನಿಂದ ತಂದೆ, ತಾಯಿ, ಸ್ನೇಹಿತರು ಬಂಧು- ಬಳಗ ಜೊತೆಯಲ್ಲಿರುತ್ತಾರೆ. ಆದರೆ ವಿವಾಹದ ಬಳಿಕ ಜೀವನದಲ್ಲಿ ಜೊತೆಗಿರುವುದು ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡ ಮಾತ್ರ; ಇದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಮಾತ್ರ ವಿವಾಹ ಮಹೋತ್ಸವಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.

ಹಿಂದಿನ ಕಾಲದಲ್ಲಿ ಮನೆಯಲ್ಲಿ ಒಂದು ಮದುವೆ ಮಾಡಿದರೆ ಮಕ್ಕಳು, ಮೊಮ್ಮಕ್ಕಳ ಕಾಲದವರೆಗೂ ಅದರ ಸಾಲ ತೀರಿಸಬೇಕಾಗುತ್ತಿತ್ತು. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಹೊರೆ ತಗ್ಗಿಸಬೇಕೆಂಬ ಉದ್ದೇಶದಿಂದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಆದ್ಯತೆ ನೀಡಲಾಗಿದೆ. ಬಡವರು, ಶ್ರೀಮಂತರು ಎಲ್ಲರೂ ಕೂಡ ದುಂದುವೆಚ್ಚವನ್ನು ತಡೆದು ಸರಳ ವಿವಾಹದ ಬಗ್ಗೆ ಆಸಕ್ತಿ ತೋರಬೇಕಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಬಗ್ಗೆ ಪ್ರತಿಯೊಬ್ಬರು ಚಿಂತನೆ ನಡೆಸಬೇಕಿದೆ ಎಂದರು.

ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತನಾಡಿ, ಸಾಮೂಹಿಕ ವಿವಾಹಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು. ಆಡಂಬರದ ವಿವಾಹಗಳಿಗೆ ದುಂದುವೆಚ್ಚ ಮಾಡುವ ಬದಲು ಸರಳ ವಿವಾಹ ಮಾಡಿಕೊಂಡು ಅದೇ ಹಣವನ್ನು ಮುಂದಿನ ಬದುಕಿಗಾಗಿ ಬಳಸಿಕೊಳ್ಳಬೇಕು. ಹೆಚ್ಚೆಚ್ಚು ಸಾಮಾಜಿಕ ವಿವಾಹಗಳು ನಡೆಯಬೇಕು ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಹಿಂದೆಲ್ಲ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಸಾವಿರಾರು ಜೋಡಿಗಳು ಪಾಲ್ಗೊಳ್ಳುತ್ತಿದ್ದವು. ಆದರೆ ಕಾಲ ಕ್ರಮೇಣ ಅದು ಬದಲಾಗಿದ್ದು, ಸಾಮೂಹಿಕ ವಿವಾಹದಲ್ಲಿ ಬೆರಳೆಣಿಕೆಯಷ್ಟು ಜೋಡಿ ಮಾತ್ರ ಇರುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೆಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಹದೇವಪ್ಪ ನಡಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಗ್ಯಾರಂಟಿ ಯೋಜನೆ ಪ್ರಾಧಿಕಾರ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ತಾಲೂಕು ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ನಾಗರಾಜ ಬೆಣ್ಣಿ, ಧರ್ಮರಾಜ ನಡಗೇರ, ಆರ್.ಜೆ ಬೆಳ್ಳನವರ, ಚಿದಾನಂದ ಹರಿಜನ, ಜ್ಞಾನದೇವ ಗುಡಿಯಾಳ, ಕಲ್ಲನಗೌಡ ಬಸನಗೌಡ್ರ ಉಪಸ್ಥಿತರಿದ್ದರು. ಬಸವರಾಜ ಸಂಗಮೇಶ್ವರ ಸ್ವಾಗತಿಸಿದರು. ಮಂಜುನಾಥ ಹರಿಜನ ನಿರೂಪಿಸಿ, ವಂದಿಸಿದರು.

೬ಎಮ್.ಎನ್.ಡಿ೧

ಮುಂಡಗೋಡದ ನಗರಸಭಾ ಭವನದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರುಗಿತು.

ಮುಂಡಗೋಡದ ನಗರಸಭಾ ಭವನದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾದಾರ ಚನ್ನಯ್ಯ ಶ್ರೀ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ