ಮಹಾರಾಜರು ಸ್ಥಾಪಿಸಿರುವ ಕೈಗಾರಿಕೋದ್ಯಮಗಳ ಪುನಶ್ಚೇತನವಾಗಲಿ: ಮಾಜಿ ಮೇಯರ್‌ ಸಂದೇಶ್ ಸ್ವಾಮಿ

KannadaprabhaNewsNetwork |  
Published : May 30, 2025, 12:32 AM IST
42 | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರದ ಮೇಲೆ ಗೂಬೆ ಕೂರಿಸದೆ, ಎಚ್.ಎ.ಎಲ್ ಸಂಸ್ಥೆಯನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಾರಾಜರು ಸ್ಥಾಪಿಸಿರುವ ಕೈಗಾರಿಕೋದ್ಯಮಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮಾಜಿ ಮೇಯರ್‌ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಒಡೆಯರಾಗಿದ್ದವರು ರಾಜ್ಯದ ವಿವಿಧೆಡೆ ಅನೇಕ ಕೈಗಾರಿಕೋದ್ಯಮ ಸ್ಥಾಪಿಸಿದ್ದಾರೆ. ಅದರಲ್ಲಿ 1940 ರಲ್ಲಿ ಸ್ಥಾಪಿಸಿರುವ ಬೆಂಗಳೂರಿನ ಎಚ್.ಎ.ಎಲ್ ಕೂಡ ಒಂದು. ಆದರೆ ಇಂದು ಅದು ನಶಿಸಿ ಹೋಗುತ್ತಿರುವ ಕಾರಣ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವ ಚಿತಾವಣೆ ನಡೆದಿದೆ. ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರದ ಮೇಲೆ ಗೂಬೆ ಕೂರಿಸದೆ, ಎಚ್.ಎ.ಎಲ್ ಸಂಸ್ಥೆಯನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಕರ್ನಾಟಕ ರೇಷ್ಮೆ ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಕೋಲಾರ ಚಿನ್ನದ ಗಣಿ, ಭದ್ರವತಿ ಕಾರ್ಖಾನೆ, ಮೈಸೂರು ಪೇಪರ್ ಮಿಲ್ ಮುಂತಾದ ಉದ್ಯಮಗಳು ಮೈಸೂರು ಮಹಾರಾಜರ ಕೊಡುಗೆಗಳು. ಅವುಗಳೀಗ ಅವಸಾನದತ್ತ ಸಾಗಿವೆ. ಈ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆ ಹೊರತು ವಿವಾದ ಸೃಷ್ಟಿಸಿರುವಂತೆ ಮೈಸೂರು ಸ್ಯಾಂಡಲ್ ಸೋಪಿನ ಪ್ರಚಾರಕ್ಕೆ ನಟಿಯೊಬ್ಬರಿಗೆ 6 ಕೋಟಿ ರು. ಸಂಭಾವನೆ ನೀಡಿ ಕಮೀಷನ್ ಕಬಳಿಸಲು ಆಸಕ್ತಿ ತೋರಿಸಿದರೆ ಉದ್ಯಮಗಳು ಪ್ರಗತಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮೈಸೂರು ಜನರಿಗೆ ಉದ್ಯೋಗ ನೀಡಲು ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ್ದ ಕೆ.ಆರ್‌. ಮಿಲ್ ಮುಚ್ಚಿ 3- 4 ದಶಕಗಳಾದವು. ಅಂತೆಯೇ ಹೆಸರಾಂತ ಜಾವ ಕಾರ್ಖಾನೆ, ಫಾಲ್ಕಾನ್ ಟೈಯರ್ಸ್, ಮಹೇಂದ್ರ ಆ್ಯಂಡ್‌ ಮಹೇಂದ್ರ, ಕಿರ್ಲೋಸ್ಕರ್ ಮುಂತಾದ ಕೈಗಾರಿಕೆಗಳು ಮುಚ್ಚಿ ಹೋಗಿ ಕಾರ್ಮಿಕರು ಬೀದಿ ಪಾಲಾಗಿದ್ದು ತಿಳಿದ ಸಂಗತಿ. ಆದರೆ ಅಧಿಕಾರಕ್ಕೆ ಬಂದ ಸರ್ಕಾರಗಳು ಇಚ್ಛಾಶಕ್ತಿಯಿಂದ ಮುಚ್ಚಿರುವ ಕಾರ್ಖಾನೆಗಳನ್ನು ಪುನಾರಂಭಿಸಿ ಕಾರ್ಮಿಕರು ಮತ್ತು ಅವರ ಅವಲಂಭಿತ ಕುಟುಂಬಗಳ ಬದುಕಿಗೆ ಸಹಾಯ ಮಾಡದೆ ಹೋದದ್ದು ದುರಂತ ಸಂಗತಿ ಎಂದಿದ್ದಾರೆ.

ಮುಂದೆಯಾದರೂ ಈ ರೀತಿ ಕೈಗಾರಿಕೋದ್ಯಮಗಳು ಮುಚ್ಚಿ ಹೋಗದಂತೆ ಅಗತ್ಯ ಕ್ರಮ ವಹಿಸುವಲ್ಲಿ ರಾಜ್ಯ ಸರ್ಕಾರ, ಮುಖ್ಯವಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಕಾರ್ಮಿಕ ಸಚಿವರು ಕಾಳಜಿ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ