ಯಲ್ಲಾಪುರ: ಪತ್ರಿಕೆಗಳು ವ್ಯಕ್ತಿಶಃ ಟೀಕೆಗಳಿಂದ ವಿಜೃಂಭಿಸುವ ಸಂಸ್ಕೃತಿ ಬೆಳೆಸಿಕೊಳ್ಳಬಾರದು. ಇದರಿಂದ ಪತ್ರಿಕೆಯ ಗೌರವ, ಮೌಲ್ಯ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಹುಬ್ಬಳ್ಳಿಯ ಡಾ. ಸರಸ್ವತಿ ಕಳಸದ ಪತ್ರಿಕಾರಂಗದ ಕುರಿತು ಉಪನ್ಯಾಸ ನೀಡಿ, ಪತ್ರಿಕೆ ಸಮಾಜದ ಅವಿಭಾಜ್ಯ ಅಂಗವಾಗಿದೆ. ಪತ್ರಕರ್ತ ಮಾಧ್ಯಮದ ಮೂಲಕ ಭಾಷೆ, ಸಂಸ್ಕೃತಿಯನ್ನು ಕಟ್ಟಿಕೊಡುವ ಮೂಲಕ ಸಮಾಜವನ್ನು ತಿದ್ದಿತೀಡುವ ಜವಾಬ್ದಾರಿ ಹೊಂದಿದ್ದಾರೆ. ಸಮಾಜದ ವಿದ್ಯಮಾನ ತಿಳಿಯಲು ಪತ್ರಿಕೋಧ್ಯಮ ಕಿಟಕಿಯಾಗಿದೆ. ಈಗ ಅಂಗೈಯಲ್ಲಿ ಮೊಬೈಲ್ ಮಾಹಿತಿ ಕಣಜವಾಗಿದೆ. ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಬೆಳೆಯಬೇಕು ಎಂದರು.
ಪ್ರವಾಸೋಧ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಜಿಲ್ಲಾಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಕೆಲವರು ಮಾಧ್ಯಮಗಳನ್ನು ಬೇಕು ಬೇಕಾದಂತೆ ಬಳಸಿಕೊಂಡು, ನಂತರ ಮಾಧ್ಯಮದವರ ಸೃಷ್ಟಿ ಎಂದು ಗೂಬೆ ಕೂರಿಸುತ್ತಾರೆ. ಸವಾಲುಗಳ ನಡುವೆ ಬದುಕುವ ಪತ್ರಕರ್ತರು ಅವಸರದಲ್ಲಿ ಕೆಲವೊಮ್ಮೆ ಅವಾಂತರಗಳನ್ನು ಎದುರಿಸಬೇಕಾಗುತ್ತದೆ. ಡಿಜಿಟಲ್ ಮಾಧ್ಯಮಗಳು ಪೈಪೋಟಿಯ ನಡುವೆ ಮುದ್ರಣ ಮಾಧ್ಯಮ ಜೀವಂತಿಕೆ ಇಟ್ಟುಕೊಂಡಿರುವುದು ಹೆಮ್ಮೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ, ಅಂಥವರನ್ನು ಸಮಾಜವೇ ದೂರ ಇಡದಿದ್ದರೆ, ಮೌಲ್ಯ, ಪತ್ರಿಕಾಧರ್ಮ ಕಾಯ್ದುಕೊಂಡ ಪತ್ರಕರ್ತರ ಹೆಸರೂ ಕೆಡುತ್ತದೆ. ಆ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರ್.ಡಿ. ಜನಾರ್ದನ ಮಾತನಾಡಿ, ಪತ್ರಿಕೆಗಳು ರಚನಾತ್ಮಕ ಟೀಕೆಗಳ ಮೂಲಕ ವ್ಯವಸ್ಥೆಯನ್ನು ಹತೋಟಿಗೆ ತರಲು ಯತ್ನಿಸಬೇಕು ಎಂದರು.ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ನಿತ್ಯವೂ ಪತ್ರಿಕೆ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ಅಧ್ಯಕ್ಷತೆ ವಹಿಸಿದ್ದರು.ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ, ಅಡಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯುವ ಪತ್ರಕರ್ತರಾದ ಶ್ರೀಧರ ಅಣಲಗಾರ, ವಿಜಯಕುಮಾರ ನಾಯ್ಕ ಅವರಿಗೆ ಯುವ ಪುರಸ್ಕಾರ, ವಿದ್ಯಾರ್ಥಿನಿ ದೀಕ್ಷಾ ಭಟ್ಟ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ಛಾಯಾಗ್ರಾಹಕ ಎಂ.ಎಸ್. ಭಟ್ಟ ಹುತ್ಗಾರ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅಭಿನಂದಿಸಿದರು. ಜಿಲ್ಲಾ ಸಂಘದ ಸದಸ್ಯೆ ಪ್ರಭಾವತಿ ಗೋವಿ ಸನ್ಮಾನಪತ್ರ ವಾಚಿಸಿದರು. ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಪತ್ರಕರ್ತರಾದ ದತ್ತಾತ್ರೇಯ ಭಟ್ಟ ಕಣ್ಣಿಪಾಲ ನಿರ್ವಹಿಸಿದರು. ಜಯರಾಜ ಗೋವಿ ವಂದಿಸಿದರು.