ಏಮ್ಸ್ ಸ್ಥಾಪನೆ ಮಾಡಲು ಚಳವಳಿ ತೀವ್ರಗೊಳ್ಳಲಿ: ಡಾ.ಬಿ.ಶಿವಬಸ್ಸಪ್ಪ ಹೆಸರೂರು

KannadaprabhaNewsNetwork | Published : Feb 2, 2025 11:45 PM

ಸಾರಾಂಶ

ಏಮ್ಸ್ಗಾಗಿ ನಡೆಯುತ್ತಿರುವ ಚಳುವಳಿ ತೀವ್ರಗೊಳಸಲು ಜನರೇ ಮುಂದಾಗಬೇಕೆಂದು ಹಿರಿಯ ಮುಖಂಡ, ಏಮ್ಸ್ ಹೋರಾಟ ಸಮಿತಿಯ ಮುಖಂಡ ನಿವೃತ್ತ ವೈದ್ಯಾಧಿಕಾರಿ ಡಾ.ಬಿ.ಶಿವಬಸ್ಸಪ್ಪ ಹೆಸರೂರು ಹೇಳಿದರು.

ಸಂಸದ ಜಿ.ಕುಮಾರ ನಾಯ್ಕ್ ರಾಜೀನಾಮೆಗೆ ಹನುಮಂತಪ್ಪ ಆಗ್ರಹ

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಲು ಆಗ್ರಹಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 1000 ದಿನಗಳು ಪೂರೈಸಿದರೂ ಕೇಂದ್ರ ಸರ್ಕಾರದ ಕಿವಿಗೊಡುತ್ತಿಲ್ಲ. ಇದರಿಂದ ಏಮ್ಸ್ಗಾಗಿ ನಡೆಯುತ್ತಿರುವ ಚಳುವಳಿ ತೀವ್ರಗೊಳಸಲು ಜನರೇ ಮುಂದಾಗಬೇಕೆಂದು ಹಿರಿಯ ಮುಖಂಡ, ಏಮ್ಸ್ ಹೋರಾಟ ಸಮಿತಿಯ ಮುಖಂಡ ನಿವೃತ್ತ ವೈದ್ಯಾಧಿಕಾರಿ ಡಾ.ಬಿ.ಶಿವಬಸ್ಸಪ್ಪ ಹೆಸರೂರು ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ, ಶೈಕ್ಷಣಿಕ, ಸಾಮಾಜಿಕವಾಗಿ ನಾನಾ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಇನ್ನೂ ಆರೋಗ್ಯದ ಸಮಸ್ಯೆ ಜನರ ಜೀವ ಹಿಂಡುತ್ತಿದೆ. ಇದರಿಂದ ಬಡ, ಸಾಮಾನ್ಯ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಜೀವಚ್ಛಯದಲ್ಲಿ ಬದುಕು ದೂಡುತ್ತಿದ್ದಾರೆ. ಇದನ್ನು ಮನಗಂಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಕಳೆದ ಎರಡುವರೆ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ ಆದರೆ ಕೇಂದ್ರ ಸರ್ಕಾರ ಏಮ್ಸ್ ಸ್ಥಾಪನೆಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ದೂರಿದರು.

ಈಗಾಗಲೇ ಏಮ್ಸ್‌ಗಾಗಿ ರಾಜದಾನಿ ದೆಹಲಿಯ ಜಂತರ್-ಮಂತರ್‌ನಲ್ಲಿ ಹೋರಾಟ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ರಾಯಚೂರಿಗೆ ಏಮ್ಸ್ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಹಿಂದುಳಿದ ಭಾಗದಲ್ಲಿ ಏಮ್ಸ್ ಸ್ಥಾಪನೆ ಮಾಡುತ್ತಿಲ್ಲ. ಇದರಿಂದ ಚಳುವಳಿಯ ತೀವ್ರಗೊಳಿಸುವ ಮೂಲಕ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲು ಏಮ್ಸ್ ಹೋರಾಟ ಉಗ್ರಗೊಳಿಸಲು ಜನ ಮುಂದೆ ಬರಬೇಕು, ಇದರ ಜೊತೆಗೆ ಶಾಲಾ-ಕಾಲೇಜ ವಿದ್ಯಾರ್ಥಿಗಳು, ದಲಿತ, ರೈತ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಸಂಸದರು ರಾಜೀನಾಮೆ ನೀಡಲಿ:

ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಕಿವಿಗೊಡತ್ತಿಲ್ಲ. ಇದರಿಂದ ರಾಯಚೂರು ಸಂಸದ ಜಿ.ಕುಮಾರ ನಾಯ್ಕ್ ರವರು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಏಮ್ಸ್ಗಾಗಿ ಕೇಂದ್ರ ಆರೋಗ್ಯ ಸಚಿವರ ನಿವಾಸದ ಮುಂದೆ ಧರಣಿ ಮಾಡಬೇಕು ಇದಕ್ಕೆ ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಬೆಂಬಲ ನೀಡಬೇಕೆಂದು ಹಿರಿಯ ದಲಿತ ಮುಖಂಡ ಹನುಮಂತಪ್ಪ ಕುಣೆಕೆಲ್ಲೂರು ಹೇಳಿದರು.

ಈ ಸಂದರ್ಭದಲ್ಲಿ ಏಮ್ಸ್ ಹೋರಾಟ ಸಮಿತಿ ತಾಲೂಕ ಅಧ್ಯಕ್ಷ ವಿನಯಕುಮಾರ ಗಣಾಚಾರಿ, ಡಿ.ಬಿ ಸೋಮನಮರಡಿ, ಲಿಂಗಪ್ಪ ಪರಂಗಿ, ಶಿವಪುತ್ರ ನಂದಿಹಾಳ, ಮಲ್ಲನಗೌಡ ರಾಂಪುರ, ಮೋಹನ್ ಗೋಸ್ಲೆ, ತಿಮ್ಮಾರೆಡ್ಡಿ, ಅನಿಲು ಕುಮಾರ ಇದ್ದರು.

Share this article